ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತುಳು ಸಮ್ಮೇಳನ: ಪುಸ್ತಕ ಮಳಿಗೆ ಬಗ್ಗೆ 'ನೂರೆಂಟು ಮಾತು' (Tulu grama | Tulu Sammelana | Ujire | Veerendra Heggade | Dharmasthala)
ಇಲ್ಲಿನ ರತ್ನವರ್ಮ ಕ್ರೀಡಾಂಗಣದ ತುಳುನಾಡ ಸಿರಿ ದೊಂಪದಲ್ಲಿ ರೂಪುಗೊಂಡಿರುವ ತುಳು ಗ್ರಾಮದ ವಿಶ್ವ ತುಳುನಾಡು ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳಲ್ಲಿ ಭರಾಟೆಯಿಂದ ಪುಸ್ತಕ ಮಾರಾಟವಾಗುತ್ತಿರುವುದು ವಿಶೇಷವಾಗಿ ಗಮನ ಸೆಳೆದಿದೆ.
ತುಳು ಸಮ್ಮೇಳನದಲ್ಲಿ ಟೆಂಟ್ ಹಾಕಿರುವ ಪುಸ್ತಕ ಮಳಿಗೆಗಳಲ್ಲಿ ರಾಜಕೀಯ, ಸಾಮಾಜಿಕ, ಶಿಕ್ಷಣ, ಸಾಮಾಜಿಕ, ಜಾನಪದ ಕಲೆ, ಆರೋಗ್ಯ ಹಾಗೂ ತುಳು ನಾಡನ್ನು ಬಿಂಬಿಸುವ ಗಾದೆಗಳು, ಒಗಟು, ಜೋಕ್ಸ್ ಮತ್ತು ಸಾಹಿತ್ಯಿಕ ಪುಸ್ತಕಗಳು ಪುಸ್ತಕ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.
ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ ಸಾವಿರಾರು ಪುಸ್ತಕಗಳು ಅಲ್ಲಿದ್ದು ಖ್ಯಾತ ಬರಹಗಾರರ ಪುಸ್ತಕಗಳು ಸಾಹಿತ್ಯ ಪ್ರಿಯರ ಗಮನ ಸೆಳೆಯುತ್ತವೆ. ಜನ ಹೆಚ್ಚು ಇಷ್ಟಪಡುವ ಪುಸ್ತಕಗಳು ಯಾವುದೆಂದು ಕೇಳಿದಾಗ ಥಟ್ಟನೇ ಉತ್ತರ ಬಂದಿದ್ದು ರವಿ ಬೆಳಗೆರೆ ಎಂದು. ಅಲ್ಲದೇ ಯುವತಿಯರು ಮೇಕಪ್, ಮೆಹಂದಿ, ಆರೋಗ್ಯ ಮಾಹಿತಿಯನ್ನು ಕೊಡುವ ಪುಸ್ತಕಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರಂತೆ. ವ್ಯಕ್ತಿತ್ವ ವಿಕಸನದಂತಹ ಹಲವಾರು ಪುಸ್ತಕಗಳು ಕೂಡ ಇಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ ಎಂಬುದು ಪುಸ್ತಕದಂಗಡಿ ಮಾಲೀಕರ ಮುಕ್ತ ಅಭಿಪ್ರಾಯ.
ಅಂಕಣಗಾರ ಪ್ರತಾಪ್ ಸಿಂಹ ಮತ್ತು ಜಿ.ಬಿ.ಹರೀಶ್ ಮಹಮ್ಮದಾಲಿ ಜಿನ್ನಾರ ಕುರಿತು ಬರೆದ ಪುಸ್ತಕಕ್ಕೆ ಬಾರೀ ಬೇಡಿಕೆ ಇದೆಯಂತೆ. ಅದೇ ರೀತಿ ಮೇಜರ್ ಸಂದೀಪ್ ಹತ್ಯೆಯ ಕುರಿತು ರವಿಬೆಳಗೆರೆ ಬರೆದ ಪುಸ್ತಕ ಹೆಚ್ಚು ಜನಪ್ರಿಯವಾಗಿದ್ದು, ವಿಶ್ವೇಶ್ವರ ಭಟ್ಟರ ಸುದ್ದಿ ಮನೆಕತೆ, ನೂರೆಂಟು ಮಾತು, ಸ್ಪೂರ್ತಿ ಸೆಲೆ, ಅಬ್ದುಲ್ ಕಲಾಂ ತಲೆಬರಹದ ಪುಸ್ತಕಗಳನ್ನು ಸಾಹಿತ್ಯಾಭಿಮಾನಿಗಳು ಹೆಚ್ಚು ಇಷ್ಟಪಡುತ್ತಾರೆ ಎನ್ನುತ್ತಾರೆ.
ಹಂಪಿ ವಿಶ್ವ ವಿದ್ಯಾನಿಲಯದ ಪುಸ್ತಕ ಮಳಿಗೆ ಇಲ್ಲಿದ್ದು ಇವರು ಸಂಶೋಧನೆಗಳಿಗೆ ಸಂಬಂಧಿಸಿದ ಪುಸ್ತಕಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಸಮಗ್ರ ತುಳು ಸಾಹಿತ್ಯ ಎಂಬ 1200 ಪುಟಗಳ ಪುಸ್ತಕ ಇಲ್ಲಿದ್ದು ಇದರ ಬೆಲೆ ಸಾವಿರ ರೂ.ಗಳಾದರೂ, ಓದುಗರಿಗೆ ನೀಡಬೇಕೆಂಬ ದೃಷ್ಟಿಯಿಂದ 50 ಶೇ. ರಿಯಾಯಿತಿಗೆ ನೀಡಲಾಗುತ್ತಿದೆ.
ಬೆಂಗಳೂರಿನ ಸಾಹಿತ್ಯ ಪುಸ್ತಕ ಮಳಿಗೆಗೆ ಭೇಟಿ ನೀಡಿದರೆ ಅಲ್ಲಿ ಹೆಚ್ಚಾಗಿ ಎಸ್.ಎಲ್.ಭೈರಪ್ಪ ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳಂತೆ. ಸಮ್ಮೇಳನದಲ್ಲಿ ಪುಸ್ತಕ ಮಳಿಗೆಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು ನಾನಾ ಬಗೆಯ ಪುಸ್ತಕಗಳು ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ.