ಅಕ್ರಮ ಗಣಿ: ಸಿಬಿಐ ದಾಳಿ ಬಗ್ಗೆ ಸಿಎಂಗೆ ಮಾಹಿತಿ ಇಲ್ವಂತೆ!
ಮೈಸೂರು, ಶುಕ್ರವಾರ, 11 ಡಿಸೆಂಬರ್ 2009( 15:54 IST )
NRB
'ರಾಜ್ಯ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಕಚೇರಿ ಮೇಲೆ ಸಿಬಿಐ ದಾಳಿ ನಡೆದಿರುವ ಬಗ್ಗೆ ತನಗೇನೂ ಗೊತ್ತಿಲ್ಲ' ಎಂದು ಹೇಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಚ್ಚರಿ ಮೂಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ ಕಚೇರಿ, ರೆಡ್ಡಿ ನಿವಾಸಗಳ ಮೇಲೆ ದಾಳಿ ನಡೆಸಿರುವ ಕುರಿತು ಮುಖ್ಯಮಂತ್ರಿಗಳನ್ನು ಸುದ್ದಿಗಾರರು ಪ್ರಶ್ನಿಸಿದಾಗ ಈ ರೀತಿ ಪ್ರತಿಕ್ರಿಯಿಸಿದರು.
ಜನಾರ್ದನ ರೆಡ್ಡಿ ಕಚೇರಿಯವರ ಮೇಲೆ ಸಿಬಿಐ ದಾಳಿ ನಡೆದ ಬಗ್ಗೆ ನನಗೇನೂ ಗೊತ್ತಿಲ್ಲ, ನಿಮ್ಮ ಹಾಗೆ ಮಾಧ್ಯಮಗಳಲ್ಲಿ ಓದಿಯೇ ಗೊತ್ತು ವಿನಃ ಬೇರೆನೂ ಮಾಹಿತಿ ತನ್ನ ಬಳಿ ಇಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಜಾರಿಕೊಂಡರು.
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತಂತೆ ನನ್ನ ಅವಧಿಯೂ ಸೇರಿದಂತೆ ವರದಿ ನೀಡುವಂತೆ ಲೋಕಾಯುಕ್ತರಿಗೆ ತಿಳಿಸಿದ್ದೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಆದರೆ ಸಿಬಿಐ ದಾಳಿ ಕುರಿತಂತೆ ಮತ್ತೆ ಪ್ರಶ್ನಿಸಿದಾಗಲೂ, ಇಲ್ಲಾರೀ ನನಗೆ ಯಾವ ಮಾಹಿತಿಯೂ ಇಲ್ಲ ಎಂದು ಪುನರುಚ್ಚರಿಸಿದರು.
ಗುರುವಾರ ಮತ್ತು ಶುಕ್ರವಾರ ಬಳ್ಳಾರಿಯಲ್ಲಿರುವ ಓಬಳಾಪುರಂ ಮೈನಿಂಗ್ ಕಂಪನಿ ಕಚೇರಿ, ರೆಡ್ಡಿ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದೆ.