ದೇಶದ ಇಪ್ಪತ್ತೆಂಟು ಭಾಷೆಗಳ ಪೈಕಿ ಮೊದಲು ಬಂದ ಭಾಷೆ ತುಳು. ಇದಕ್ಕೆ 2500 ವರ್ಷಗಳ ಇತಿಹಾಸವಿದೆ. ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳು ನಂತರ ಬೆಳಕಿಗೆ ಬಂದಿವೆ. ತಮಿಳಿಗೆ ಭಾಷಾ ಪ್ರಾತಿನಿಧ್ಯ ದೊರೆತಂತೆ ತುಳುವಿಗೂ ಭಾಷಾ ಪ್ರಾತಿನಿಧ್ಯ ನೀಡಬೇಕು ಎಂದು ಜರ್ಮನಿಯ ಮಾಕ್ಸ್ ವಿಲಿಯಮ್ಸ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕ ಡಾ. ಬಿ.ಎ.ವಿವೇಕ ರೈ ಉಪನ್ಯಾಸ ನೀಡಿದರು.
ಅವರು ಶುಕ್ರವಾರ ಇಲ್ಲಿನ ವಿಶ್ವತುಳು ಸಮ್ಮೇಳನದ ಅಂಗವಾಗಿ ಎರಡನೇ ದಿನದ ಸರ್ವ ಗೋಷ್ಠಿಗಳ ಉದ್ಘಾಟನೆಯನ್ನು ನೆರವೇರಿಸಿ ತುಳು ಭಾಷೆಯ ಹುಟ್ಟು ಮತ್ತು ಬೆಳವಣಿಗೆ ಕುರಿತು ಮಾತನಾಡಿದರು.
ತುಳು ಭಾಷಾ ವಲಯದಿಂದ ಹೊರ ಹೋದವರನ್ನು ಮತ್ತೆ ಒಳಕ್ಕೆ ಸೇರಿಸಲು ಮಾಯೆ ಮತ್ತು ಮತೀಯ ಬೀಗ ತೆಗೆಯಬೇಕು. ಈ ನಾಲ್ಕು ದಿನಗಳಲ್ಲಿ ಇದಕ್ಕೆ ಪ್ರಯತ್ನ ನಡೆದಿದೆ. ಮೊದಲು ರಾಜ್ಯದಲ್ಲಿ ನಂತರ ವಿಶ್ವಮಟ್ಟದಲ್ಲಿ ತುಳು ಭಾಷೆಯನ್ನು ಪಳಗಿಸುವ ಕೆಲಸ ನಡೆಯಬೇಕು. ಆದರೆ ಈ ಕಾರ್ಯ ಇದುವರೆಗೆ ನಡೆದಿಲ್ಲ. ಅಡುಗೆ ಮನೆಯಲ್ಲೇ ಭಾಷೆಯನ್ನು ಅಡಗಿಸಿಡುವ ನಮ್ಮ ಗುಣದಿಂದ ತುಳು ಭಾಷೆ ಹಿಂದೆ ಉಳಿದಿದೆ ಎಂದು ಆಭಿಪ್ರಾಯಪಟ್ಟರು.
ತುಳು ಭಾಷೆಯ ಉಳಿಕೆಯಲ್ಲಿ ನಾಲ್ಕು ನೆಲೆಗಳು ಪ್ರಮುಖ ಪಾತ್ರ ವಹಿಸಿವೆ. ಮನೆಯಲ್ಲಿ ಮಾತನಾಡುವಾಗ ಪರಿಣಾಮಕಾರಿಯಾದ ಪದಗಳ ಬಳಕೆ, ವ್ಯವಸಾಯ ಮಾಡುವಾಗ ಪಾಡ್ದನಗಳನ್ನು ಹಾಡುವುದು, ಆರಾಧನೆ ಆಚರಣೆ ಸಂದರ್ಭದಲ್ಲಿ ಸಂಧಿ, ವುರಲ್, ಮುಂತಾದವುಗಳ ಬಳಕೆ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಶೈಕ್ಷಣಿಕ ವಲಯದಲ್ಲಿ ನಾವು ತುಳು ಭಾಷೆಯನ್ನು ಇನ್ನಷ್ಟು ಪ್ರಭಾವಶಾಲಿಯಾಗಿ ಬಳಸುವತ್ತ ಯೋಚಿಸಬೇಕಾಗಿದೆ ಎಂದರು.
ತುಳು ಭಾಷೆಗೆ ಸ್ಥಾನಮಾನ ಕೊಡಿಸುವ ಕೆಲಸ ವಿದ್ವಾಂಸರಿಂದ ಮಾಡಿಸುವುದು ಕಷ್ಟ. ಈ ಕೆಲಸವೇನಿದ್ದರೂ ರಾಜಕೀಯ ನಾಯಕರಿಂದಾಗಬೇಕಾಗಿದೆ ಗ್ರಾಮಮಟ್ಟದಿಂದ ಹಿಡಿದು ಜಿಲ್ಲಾಮಟ್ಟದವರೆಗಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ತುಳು ಆಡಳಿತ ಭಾಷೆಯಾಗಬೇಕು. ಸರಕಾರ ಇದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಹೇಳಿದರು.
ಹೆಂಗಸರ ಬೆರಳನ್ನು ತಿನ್ನೋಕಾಗುತ್ತಾ?: ಇಂಟರ್ನೆಟ್‌ಗಳಲ್ಲೂ ತುಳು ಭಾಷೆ ಪ್ರಚಲಿತವಾಗಬೇಕು. ತುಳು ಮಾತನಾಡುವಾಗ ಅನ್ಯ ಭಾಷಾ ಪದಗಳ ಬಳಕೆ ನಿಲ್ಲಬೇಕು. ಅನ್ನದ ಬದಲು ರೈಸ್, ಕೋಳಿಯ ಬದಲು ಚಿಕನ್, ಬೆಂಡೆಕಾಯಿಯ ಬದಲು 'ಲೇಡಿಸ್ ಫಿಂಗರ್' ಮುಂತಾದ ಪದಗಳ ಬಳಕೆ ಊಟದ ಹೋಟೆಲ್ ಕೆಲಸಗಾರರಿಂದ ಉಂಟಾದ ಪ್ರಮಾದದಿಂದಾಗಿದೆ. ಹೆಂಗಸರ ಬೆರಳನ್ನು ತಿನ್ನಲಿಕ್ಕಾಗುತ್ತಾ? ಎಂದು ಪ್ರಶ್ನಿಸಿದ ಅವರು ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಕಥೆ ಕಾದಂಬರಿ ಕನ್ನಡಕ್ಕಿಂತ ಮೊದಲು ತುಳುವಿನಲ್ಲಿ!: ಉಡುಪಿ ತುಳು ನಿಘಂಟುವಿನ ಪ್ರಧಾನ ಸಂಪಾದಕ ಡಾ. ಯು.ಪಿ. ಉಪಾಧ್ಯಾಯರು 'ತುಳು ಭಾಷೆಯ ಇಂದಿನ ನೆಲೆ' ಎಂಬುದರ ಬಗ್ಗೆ ವಿಷಯ ಮಂಡಿಸಿದರು. ಕ್ರಿಸ್ತಪೂರ್ವ ಆರನೇ ಶತಮಾನದಿಂದಲೇ ತುಳು ಭಾಷೆ ಬಳಕೆಯಿದೆ. ಸಾಹಿತ್ಯ ನಂತರ, ಮೊದಲು ಮಾತಿನ ಮೂಲಕ ಭಾಷೆ ಬೆಳೆಯುತ್ತದೆ. ತುಳುವಿಗೆ ಪ್ರಾತಿನಿಧ್ಯ ಸಿಗಲು ಬೇಕಾದ ಹಲವು ದಾಖಲೆಗಳು ಇವೆ. ಕಥೆ ಕಾದಂಬರಿ ಕನ್ನಡದಲ್ಲಿ ಬೆಳೆಯುವುದಕ್ಕಿಂತ ಮೊದಲೇ ತುಳು ಭಾಷೆಯಲ್ಲಿ ಪ್ರಚಲಿತಕ್ಕೆ ಬಂದಿದೆ. ಇವತ್ತು ಅನೇಕ ಮಂದಿ ತುಳು ಭಾಷೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಅಮೇರಿಕಾದ ಸಂಶೋಧನೆಯ ಪ್ರಕಾರ ಜಗತ್ತಿನ 133 ಪ್ರಧಾನ ಭಾಷೆಗಳಲ್ಲಿ ತುಳು ಭಾಷೆಯೂ ಒಂದು ಎಂದು ತಿಳಿದು ಬಂದಿದೆ. ದೇಶದ 17 ಪ್ರಧಾನ ಭಾಷೆಗಳಲ್ಲಿ ಕೇಂದ್ರ ಸರಕಾರ ತುಳುವಿಗೆ ಅಧಿಕೃತ ಸ್ಥಾನ ಮಾನ ನೀಡಲು ಮೀನ ಮೇಷ ಎಣಿಸುತ್ತಿದೆ. ರಾಜ್ಯ ಸರಕಾರ ತುಳುವನ್ನು ರಾಜ್ಯದ ಎರಡನೇ ಅತೀ ದೊಡ್ಡ ಭಾಷೆ ಎಂದು ಶಿಫಾರಸು ಮಾಡಬೇಕಾಗಿದೆ ಎಂದರು.
ತುಳು ಪ್ರಾಚೀನ ಶಾಸ್ತ್ರೀಯ ಶೈಲಿಯಲ್ಲಿ ಪಾಡ್ದನ, ಮಾಯೆ, ಮದಿ, ಮದಿಪು, ಸಂಧಿ, ಉರಲ್ ಕವಿತೆಗಳ ನುಡಿ ಸಿಂಗಾರವನ್ನು ಪೋಣಿಸಿದ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಉಪನ್ಯಾಸಕ ಗಣೇಶ್ ಅಮೀನ್ ಸಂಕಮಾರ್ ಮಾತುಗಳನ್ನು ಸಭಿಕರು ಕರತಾಡನಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಪಾದೆಕಲ್ಲು ವಿಷ್ಣುಭಟ್ ಸಂಪಾದಕತ್ವದ ಕನ್ನಡ ತುಳು ಪದ ಪ್ರಯೋಗ ಕೋಶ ಪುಸ್ತಕವನ್ನು ಡಾ.ಬಿ.ಎ. ವಿವೇಕ ರೈ ಬಿಡುಗಡೆಗೊಳಿಸಿದರು. ಡಾ. ಬಿ.ಶಿವರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.