ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರು ಶನಿವಾರ ಬಳ್ಳಾರಿ ಗ್ರಾಮ ಪಂಚಾಯತ್‌ನ ನೂರಕ್ಕೂ ಹೆಚ್ಚು ಮಂದಿ ಸದಸ್ಯರನ್ನು ಹೈಜಾಕ್ ಮಾಡಿ ಪ್ರತ್ಯೇಕ ಸ್ಥಳದಲ್ಲಿ ಇರಿಸಿರುವ ಘಟನೆ ನಡೆದಿದೆ.
ಆಪರೇಶನ್ ಕಮಲ ನಡೆಸುವ ಮೂಲಕ ವಿಧಾನಸಭೆಯ ಉಪಚುನಾವಣೆಗೆ ಕಾರಣವಾಗಿದ್ದ ಆಡಳಿತಾರೂಢ ಬಿಜೆಪಿ, ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲೂ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಮತ್ತೊಂದು ಹುನ್ನಾರಿಗೆ ಮುಂದಾಗಿದೆ.
ಆ ನಿಟ್ಟಿನಲ್ಲಿ ರೆಡ್ಡಿ ಸಹೋದರರು ಇಂದು ಬಳ್ಳಾರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು ನೂರು ಮಂದಿ ಸದಸ್ಯರನ್ನು ಹೈಜಾಕ್ ಮಾಡಿದೆ. ಹೈಜಾಕ್ ಮಾಡಿರುವ ಸದಸ್ಯರನ್ನು ಧಾರವಾಡದಲ್ಲಿರುವ ಮಯೂರ್ ಮತ್ತು ಟ್ರಾವೆಲ್ ಇನ್ ಐಶಾರಾಮಿ ಹೊಟೇಲ್‌ನಲ್ಲಿ ಇರಿಸಿರುವುದಾಗಿ ಮೂಲಗಳು ತಿಳಿಸಿವೆ. ಒಬ್ಬೊಬ್ಬ ಸದಸ್ಯರಿಗೆ 40ಸಾವಿರ ರೂಪಾಯಿ ಹಣವನ್ನು ಪಾವತಿಸಲಾಗಿದೆ ಎಂದು ಹೇಳಲಾಗುತ್ತಿದೆ.
ತಾವು ರೆಡ್ಡಿ ಸಹೋದರರ ಸೂಚನೆ ಮೇರೆಗೆ ಧಾರವಾಡದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವುದಾಗಿ ಪಂಚಾಯ್ತಿ ಸದಸ್ಯರೇ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಡಿಸೆಂಬರ್ 18ರಂದು ವಿಧಾನಪರಿಷತ್‌ನ 25ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮ ಮೇಲುಗೈ ಸಾಧಿಸಲು ಬಿಜೆಪಿ ಈಗಾಗಲೇ ತಾಲೀಮು ಆರಂಭಿಸಿರುವುದು ಸ್ಪಷ್ಟವಾಗಿದೆ.