ಪ್ರತ್ಯೇಕ ತೆಲಂಗಾಣ ಹೋರಾಟದ ಪರ-ವಿರೋಧದ ಕಿಚ್ಚು ಇನ್ನೂ ಮುಂದುವರಿದಿರುವ ನಡುವೆಯೇ, ಹೈದರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದರೆ ತೆಲಂಗಾಣ ಮಾದರಿ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್-ಕರ್ನಾಟಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಆ ನಿಟ್ಟಿನಲ್ಲಿ ಕಳೆದ ಐದು ದಶಕಗಳಿಂದ ಹೋರಾಟ ನಡೆಸುತ್ತ ಬಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಹೈದರಾಬಾದ್-ಕರ್ನಾಟಕ ಭಾಗಕ್ಕೆ ಕಲಂ 371ಜಾರಿಗೊಳಿಸುವ ಮೂಲಕ ಈ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಸಾಕಷ್ಟು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಹೈದರಾಬಾದ್-ಕರ್ನಾಟಕ ಪ್ರದೇಶದ ಬಗ್ಗೆ ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರಿದಲ್ಲಿ ತೆಲಂಗಾಣ ಮಾದರಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.