ಹೈಜಾಕ್-ರೆಡ್ಡಿ ಸಹೋದರರ ವಿರುದ್ಧ ಕ್ರಮ ಕೈಗೊಳ್ಳಿ: ದೇಶಪಾಂಡೆ
ಹುಬ್ಬಳ್ಳಿ, ಭಾನುವಾರ, 13 ಡಿಸೆಂಬರ್ 2009( 11:36 IST )
NRB
ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಹಣದ ಆಮಿಷವೊಡ್ಡಿ ಬಳ್ಳಾರಿ ಗ್ರಾಮ ಪಂಚಾಯತ್ ಸದಸ್ಯರನ್ನು ಹೈಜಾಕ್ ಮಾಡಿರುವ ರೆಡ್ಡಿ ಸಹೋದರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಭಾನುವಾರ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಡ್ಡಿ ಸಹೋದರರ ರೆಸಾರ್ಟ್ ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಎಂದು ಹೇಳಿದರು.
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರಕ್ಕೂ ಹೆಚ್ಚು ಸದಸ್ಯರನ್ನು ಹೈಜಾಕ್ ಮಾಡಿ ಧಾರವಾಡದ ಹೋಟೆಲ್‌ನಲ್ಲಿ ಇರಿಸಲಾಗಿದೆ. ಅಲ್ಲದೇ, ತಾವೆಲ್ಲ ರೆಡ್ಡಿ ಸಹೋದರರ ಸೂಚನೆ ಮೇರೆಗೆ ಧಾರವಾಡಕ್ಕೆ ಬಂದಿರುವುದಾಗಿ ಸ್ವತಃ ಹೈಜಾಕ್ ಆದ ಗ್ರಾ.ಪಂ.ಸದಸ್ಯರೇ ಸುದ್ದಿಗಾರರಿಗೆ ತಿಳಿಸಿದ್ದರು.
ಗ್ರಾಮ ಪಂಚಾಯತ್ ಸದಸ್ಯರನ್ನು ಹೈಜಾಕ್ ಮಾಡಿರುವ ಪ್ರಕರಣದ ಬಗ್ಗೆ ಬಳ್ಳಾರಿಯಿಂದಲೇ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗಿದೆ ಎಂದ ಅವರು, ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರೊಂದಿಗೂ ಚರ್ಚಿಸಲಾಗುವುದು ಎಂದರು.
ಧಾರವಾಡ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿರುವ ಗ್ರಾಮ ಪಂಚಾಯತ್ ಸದಸ್ಯರನ್ನು ಕೂಡಲೇ ಬಳ್ಳಾರಿಗೆ ವಾಪಸು ಕಳುಹಿಸಬೇಕು. ಹಾಗೂ ರೆಡ್ಡಿ ಸಹೋದರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಧಾರವಾಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗೆ ದೇಶಪಾಂಡೆ ಆಗ್ರಹಿಸಿದ್ದಾರೆ.