ತನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಕಾಲ ಕಳೆಯುತ್ತಿರುವ ಪ್ರತಿಪಕ್ಷಗಳ ಮುಖಂಡರು ದೇವರು ಅಕ್ರಮವಾಗಿ ಸೃಷ್ಟಿಸಿದ ಶನಿ ಸಂತಾನಗಳು ಎಂದು ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಕಿಡಿ ಕಾರಿದ್ದಾರೆ.
ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂಬ ಪುರಾವೆಯನ್ನು ನೀಡಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಹುರುಳಿಲ್ಲದ ಆರೋಪಗಳನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದು ತನ್ನ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡ ರೆಡ್ಡಿ, ಸಚಿವ ಸಂಪುಟದಿಂದ ನಮ್ಮನ್ನು ಕೈ ಬಿಡಬೇಕೆಂದು ಆಗ್ರಹಿಸಲು ಯಾವುದೇ ನೈತಿಕ ಹಕ್ಕು ಅವರಿಗಿಲ್ಲ ಎಂದರು.
ಅಲ್ಲದೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸಲ್ಲಿಸಿರುವ ವರದಿಯ ಕುರಿತೂ ರೆಡ್ಡಿ ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಎಲ್ಲೋ ಕುಳಿತು ವರದಿಯನ್ನು ಸಿದ್ಧಪಡಿಸಿದ್ದಾರೆಯೇ ಹೊರತು, ವಾಸ್ತವಾಂಶವನ್ನು ಗಮನಿಸಿಲ್ಲ. ನಾವು ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ಎಂದರು.
ನಮ್ಮ ವಿರುದ್ಧ ಈಗ ಕಾಂಗ್ರೆಸ್, ಜೆಡಿಎಸ್ ಮತ್ತು ಟಿಡಿಪಿ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸುತ್ತಿವೆ. ದೇವರ ದಯೆಯಿಂದ ನಮಗೆ ಹೋದಲ್ಲೆಲ್ಲ ಜಯವೇ ಲಭಿಸುತ್ತಿದೆ. ಆಂಧ್ರಪ್ರದೇಶ ಉಚ್ಚನ್ಯಾಯಾಲಾಯದಲ್ಲೂ ನಮಗೆ ಅದೇ ಆಗಿದೆ. ನಾವು ಯಾವುದೇ ತಪ್ಪನ್ನು ಮಾಡಿಲ್ಲದಿರುವುದರಿಂದ ಹೆದರುವ ಅಗತ್ಯವಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಮಗೆ ನಂಬಿಕೆಯಿದೆ ಎಂದರು.
ಇಡೀ ದೇಶದಲ್ಲಿ 200ಕ್ಕೂ ಹೆಚ್ಚು ಉದ್ಯಮಿಗಳು ಗಣಿಗಾರಿಕೆ ನಡೆಸುತ್ತಿದ್ದರೂ ನಮ್ಮ ಮೇಲೆ ಮಾತ್ರ ಕೇಂದ್ರ ಕೆಂಗಣ್ಣು ಹಾಕಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ರೋಸಯ್ಯನವರೂ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಯಾವುದೇ ಆಧಾರವಿಲ್ಲದೆ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಆಂಧ್ರ ಸರಕಾರ ಆದೇಶ ನೀಡಿತ್ತು. ಇತ್ತ ಕೇಂದ್ರ ಸಿಬಿಐ ತನಿಖೆಗೆ ಸೂಚಿಸಿದೆ. ಆದರೆ ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ತನ್ನ ಮಾತನ್ನು ಅವರು ಪುನರುಚ್ಛರಿಸಿದರು.
ಜತೆಗೆ ಆಂಧ್ರಪ್ರದೇಶದಲ್ಲಿ ತಮ್ಮ ಮಾಲಕತ್ವದ ಬ್ರಹ್ಮಿಣಿ ಕಾರ್ಖಾನೆಯನ್ನು ಸ್ಥಗಿತಗೊಳಿಸಲು ಯಾರಿಂದಲೂ ಅಸಾಧ್ಯ ಎಂದು ಗುಡುಗಿರುವ ರೆಡ್ಡಿ, ಓಬಳಾಪುರಂ ಮೈನಿಂಗ್ ಕಂಪನಿ ಆದಾಯದ 1,500 ಕೋಟಿ ರೂಪಾಯಿಗಳನ್ನು ಕಾರ್ಖಾನೆಗಾಗಿ ಹೂಡಲಾಗಿದೆ; ಇದರ ವಿರುದ್ಧ ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವರು ಪಿತೂರಿ ನಡೆಸುತ್ತಿದ್ದಾರೆ. ನಿಗದಿಯಂತೆ ಅಕ್ಟೋಬರ್ ವೇಳೆಗೆ ಕಂಪನಿ ಉದ್ಘಾಟನೆಯಾಗುತ್ತದೆ ಎಂದು ಅವರು ತಿಳಿಸಿದರು.