ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದಾವೂದ್‌ಗೆ ಕೊಡಗಿನಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿಯಿದೆ: ಅಪ್ಪಚ್ಚುರಂಜನ್ (Dawood Ibrahim | Underworld don | Pakistan | kodagu | BJP)
ಭೂಗತ ಪಾತಕಿ, ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿರುವ ದಾವೂದ್ ಇಬ್ರಾಹಿಂಗೆ ಕೊಡಗು ಜಿಲ್ಲೆಯಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಇದ್ದು, ಆ ಬಗ್ಗೆ ಸರ್ಕಾರ ತನಿಖೆ ನಡೆಸಬೇಕೆಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಒತ್ತಾಯಿಸಿದ್ದಾರೆ.
ಕಳೆದ ವರ್ಷ ನಡೆದ ಬೆಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾಗಿರುವ ಶಂಕಿತ ಉಗ್ರ ನಜೀರ್ ಕೊಡಗಿನಲ್ಲಿ ಶುಂಠಿ ಗುತ್ತಿಗೆದಾರರನ ನೆಪದಲ್ಲಿ ಠಿಕಾಣಿ ಹೂಡಿದ್ದ ಎಂಬ ಅಂಶ ಬೆಳಕಿಗೆ ಬಂದ ಬೆನ್ನಲ್ಲೇ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇದೀಗ ದಾವೂದ್ ಕೂಡ ಕೊಡಗಿನಲ್ಲಿ ಬೇನಾಮಿ ಆಸ್ತಿ ಹೊಂದಿರುವುದಾಗಿ ಸ್ಫೋಟಕ ವಿಷಯವನ್ನು ಹೊರಗೆಡವಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1996ರಲ್ಲೇ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಕೊಡಗು ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕೆಂದು ಎಚ್ಚರಿಸಿದ್ದೆ.ಆದರೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಾಗಿಯೇ ಶಂಕಿತ ಉಗ್ರ ನಜೀರ್ ಕೊಡಗಿನ ಹೊಸತೋಟದಲ್ಲಿ ವಾಸ್ತವ್ಯ ಹೂಡಲು ಸಾಧ್ಯವಾಯಿತು ಎಂದು ಆರೋಪಿಸಿದ್ದಾರೆ.
ಅಂಡರ್‌ವರ್ಲ್ಡ್ ಡಾನ್ ದಾವೂದ್‌ಗೆ ಕೊಡಗಿನಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಇದೆ ಎಂಬ ಬಗ್ಗೆ ಈ ಹಿಂದೆಯೇ ಪ್ರಸ್ತಾಪಿಸಿದ್ದೆ,ಈ ಬಗ್ಗೆ ತನಗೆ ಬೆದರಿಕೆ ಕರೆಗಳು ಕೂಡ ಬಂದಿರುವುದಾಗಿ ಈ ಸಂದರ್ಭದಲ್ಲಿ ಹೇಳಿದರು. ಆ ಸಂದರ್ಭದಲ್ಲಿ ಸರ್ಕಾರ ತನಗೆ ರಕ್ಷಣೆಯನ್ನೂ ಕೊಟ್ಟಿತ್ತು ಎಂದು ಹೇಳಿದರು.