ರೆಡ್ಡಿ ಬ್ರದರ್ಸ್ ರಾಜ್ಯಕ್ಕೆ ಶನಿಗಳಾಗಿದ್ದಾರೆ: ಸಿದ್ದರಾಮಯ್ಯ
ಬೆಂಗಳೂರು, ಸೋಮವಾರ, 14 ಡಿಸೆಂಬರ್ 2009( 13:07 IST )
NRB
ಪ್ರತಿಪಕ್ಷಗಳ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿರುವ ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರೆಡ್ಡಿ ಸಹೋದರರು ನಮ್ಮ ರಾಜ್ಯಕ್ಕೆ ಶನಿಗಳಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಅಧಿವೇಶನದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ ಸಹೋದರರು ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಅಲ್ಲದೇ, ಪ್ರತಿಪಕ್ಷಗಳ ಮುಖಂಡರ ಹಾಗೂ ಪ್ರತಿಪಕ್ಷಗಳ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವ ಮೂಲಕ ತಾವು ಅನಾಗರಿಕರು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಣಬಲದಿಂದ ಮೆರೆಯುತ್ತಿರುವ ರೆಡ್ಡಿ ಸಹೋದರರಿಂದ ಪ್ರಜಾಪ್ರಭುತ್ವದ ಮೌಲ್ಯ ನಾಶವಾಗಿದೆ. ಆ ಕಾರಣಕ್ಕಾಗಿಯೇ ರೆಸಾರ್ಟ್ ರಾಜಕಾರಣ ಆರಂಭಿಸಿರುವ ರೆಡ್ಡಿ ಸಹೋದರರು ಇದೀಗ ಗ್ರಾ.ಪಂ.ಸದಸ್ಯರನ್ನು ಕೂಡ ಹೈಜಾಕ್ ಮಾಡುವಂತಹ ಕೀಳು ಮಟ್ಟದ ರಾಜಕಾರಣ ನಡೆಸುತ್ತಿರುವುದಾಗಿ ಆರೋಪಿಸಿದರು. ಅವರು ಈ ರಾಜ್ಯದ ಸಚಿವರಾಗಿರುವುದು ಜನರ ದೌರ್ಭಾಗ್ಯ ಎಂದರು.
ಡಿ.21ರಿಂದ ನಡೆಯಲಿರುವ ವಿಧಾನಮಂಡಲ ಕಲಾಪದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಓಎಂಸಿ ಗಣಿಗಾರಿಕೆ ಮೇಲೆ ನಡೆದ ಸಿಬಿಐ ದಾಳಿ, ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಅಸಮರ್ಪಕ ಪರಿಹಾರ ಕಾರ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.