ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದ ನಾಯಕತ್ವದಿಂದ ಬದಲಾಯಿಸಬೇಕೆಂದು ಒತ್ತಾಯಿಸಿ 'ರೆಸಾರ್ಟ್ ರಾಜಕೀಯ' ಮಾಡಿ ಬಿಜೆಪಿಯಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಸಿದ್ದ ಸಚಿವ ಜನಾರ್ದನ ರೆಡ್ಡಿ, ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕದ ತಟ್ಟಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಬಹಿರಂಗಗೊಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಯಲ್ಲಿ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ರೆಡ್ಡಿ ಸಹೋದರರು ಕಾಂಗ್ರೆಸ್ ಕದ ತಟ್ಟಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೊಪ್ಪು ಹಾಕಲಿಲ್ಲ ಎಂದು ಹೇಳಿದರು.
ಆದರೆ ಕಾಂಗ್ರೆಸ್ ಸೇರ್ಪಡೆಗೊಳ್ಳಲು ರೆಡ್ಡಿ ಸಹೋದರರು ಯಾರನ್ನು ಸಂಪರ್ಕಿಸಿದರು ಎಂಬುದನ್ನು ಬಹಿರಂಗಪಡಿಸಿದ ದೇಶಪಾಂಡೆ, ರೆಡ್ಡಿ ಸಹೋದರರಿಂದಲೇ ಆಡಳಿತಾರೂಢ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಏತನ್ಮಧ್ಯೆ ದೇಶಪಾಂಡೆ ಅವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಜನಾರ್ದನ ರೆಡ್ಡಿ, ಪಕ್ಷದಿಂದ ಪಕ್ಷಕ್ಕೆ ಹಾರುವ ಸಂಸ್ಕೃತಿ ನಮ್ಮದಲ್ಲ. ದೇಶಪಾಂಡೆ ಅವರಿಗೇನಾದ್ರೂ ನಾಚಿಕೆ ಇದೆಯಾ?ಜನತಾಪಕ್ಷ, ಲೋಕಶಕ್ತಿ, ಸಂಯುಕ್ತ ಜನತಾದಳ ಸುತ್ತಾಡಿ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಟೀಕಿಸಿದರು.