ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಅವರನ್ನು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಾದಿಸಲು ನ್ಯಾಯವಾದಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸುಷ್ಮಾ ಅವರ ಪತಿ ಕೌಶಲ್ ಬೇರೆ ಯಾವುದೇ ರಾಜ್ಯದ ಪರವಾಗಿ ಕೆಲಸ ಮಾಡಿದ ಅನುಭವ ಹೊಂದಿಲ್ಲ, ಆದರೂ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರದ ಪರ ನ್ಯಾಯವಾದಿಯಾಗಿ ನೇಮಿಸಿ ಸ್ಥಾನ ಕಲ್ಪಿಸಲಾಗಿದೆ. ಡಿಸೆಂಬರ್ 5ರಂದು ರಾಜ್ಯ ಸರ್ಕಾರ ಸ್ವರಾಜ್ ಕೌಶಲ್ ಅವರನ್ನು ರಾಜ್ಯದ ಪರ ವಾದಿಸುವ ನ್ಯಾಯವಾದಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು.
ಸುಪ್ರೀಂಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡಲು ಕೆಲವು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಆದರೆ ಅವುಗಳನ್ನೆಲ್ಲಾ ಗಾಳಿಗೆ ತೂರಿ ಮಿಜೋರಾಂನ ಮಾಜಿ ಗವರ್ನರ್ ಕೌಶಲ್ ಅವರನ್ನು ನೇಮಕ ಮಾಡಲಾಗಿದೆ ಎನ್ನವು ಆರೋಪವೂ ಕೇಳಿ ಬರುತ್ತಿದೆ.
ಸುಪ್ರೀಂಕೋರ್ಟ್‌ನಲ್ಲಿ ಪರಿಣತಿ ಹೊಂದಿರುವವರು ಅಥವಾ ಹೈಕೋರ್ಟ್‌ನ ಹಿರಿಯ ವಕೀಲರನ್ನು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರ ವಾದಿಸಲು ನೇಮಕ ಮಾಡುವುದು ವಾಡಿಕೆ. ಆದರೆ ಈ ರೀತಿಯ ಅನುಭವ ಇಲ್ಲದ ಸ್ವರಾಜ್ ಅವರನ್ನು ನೇಮಿಸಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗಣಿಧಣಿಗಳಾದ ಜನಾರ್ದನ ರೆಡ್ಡಿ ಸಹೋದರರ ನಡುವೆ ತಲೆದೋರಿದ ಬಿಕ್ಕಟ್ಟು ಶಮನ ಮಾಡುವಲ್ಲಿ ಸುಷ್ಮಾ ಸ್ವರಾಜ್ ಪ್ರದಾನ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
1999ರಲ್ಲಿ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಸುಷ್ಮಾ ಸ್ವರಾಜ್ ಅವರು ಬಳ್ಳಾರಿ ಲೋಕಸಭೆಯಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಸುಷ್ಮಾ ಅವರು ರೆಡ್ಡಿ ಬ್ರದರ್ಸ್ ಕುಟುಂಬಕ್ಕೆ ಆಪ್ತರಾಗಿದ್ದರು. ಆ ನಿಟ್ಟಿನಲ್ಲಿಯೇ ರೆಡ್ಡಿ ಬ್ರದರ್ಸ್ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಯಾವಾಗಲೂ ಮಾತನ್ನಾಡುತ್ತಿರುವ ಸಂದರ್ಭ, 'ನಮ್ಮ ತಾಯಿ ಸುಷ್ಮಾ ಸ್ವರಾಜ್' ಎನ್ನುತ್ತಿರುವುದು ಕೂಡ ಗಮನಾರ್ಹವಾಗಿದೆ.