'ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ಸಂಸ್ಕೃತಿಯನ್ನು ಮುಂದುವರಿಸಿದ್ದು, ಈ ರೆಸಾರ್ಟ್ ಸಂಸ್ಕೃತಿಯೇ ಬಿಜೆಪಿಗೆ ಮುಳುವಾಗಲಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಶನ್ ಕಮಲ, ರೆಸಾರ್ಟ್ ರಾಜಕೀಯದಂತಹ ಸಂಸ್ಕೃತಿಯನ್ನು ಬೆಳೆಸಿರುವ ಬಿಜೆಪಿ ಸ್ವತಃ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿದೆ ಎಂದರು. ಅಲ್ಲದೇ, ತಾನು ಕಾಂಗ್ರೆಸ್ ವರಿಷ್ಠರ ಭೇಟಿಗಾಗಿ ರಾಜಧಾನಿಗೆ ಬಂದಿಲ್ಲ ಎಂದ ಅವರು,ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾಸ್ತವ್ಯ ಹೂಡಿರುವುದಾಗಿ ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರು ಬಳ್ಳಾರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರು ಮಂದಿ ಸದಸ್ಯರನ್ನು ಹೈಜಾಕ್ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ಆ ನಿಟ್ಟಿನಲ್ಲಿ ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತನ್ನ ಕೀಳುಮಟ್ಟದ ರಾಜಕೀಯ ತಂತ್ರ ಅನುಸರಿಸಲು ಹೊರಟಿರುವುದು ಪ್ರಜಾತಂತ್ರದ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಣಬಲ, ತೋಳ್ಬಲದ ಮೂಲಕ ಅಧಿಕಾರ ನಡೆಸುತ್ತಿರುವ ಆಡಳಿತಾರೂಢ ಬಿಜೆಪಿಗೆ ತಕ್ಕಪಾಠ ಕಲಿಸುವ ನಿಟ್ಟಿನಲ್ಲಿಯೇ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಪುನರುಚ್ಚರಿಸಿದರು.