ರೈತರ ಮೇಲಿನ ಲಾಠಿ ಪ್ರಹಾರ ಪ್ರಕರಣ ಹಾಗೂ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 'ತಿಥಿ' ಊಟ ಮಾಡುವ ಮೂಲಕ ಹರಿಹರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ರೈತರು ತಮ್ಮ ಆಕ್ರೋಶವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದರು.
ಅನಿಯಮಿತ ವಿದ್ಯತ್ ಪೂರೈಕೆ ಮತ್ತು ಲಾಠಿ ಚಾರ್ಜ್ ವಿರೋಧಿಸಿ ಹಲವು ರೈತ ಬಾಂಧವರು ಮುಖ್ಯಮಂತ್ರಿಗಳ ತಿಥಿಯೂಟ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೂರಾರು ರೈತರು ಇಲ್ಲಿನ ಬಾಡಾ ಕ್ರಾಸಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ತಡೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪನವರ ತಿಥಿ ಊಟ ಮಾಡಿ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆ ವೇಳೆ ಹಲವು ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ರೈತರ ಪ್ರತಿಭಟನೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಇದೇ ಸಂದರ್ಭದಲ್ಲಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ದಾವಣಗೆರೆ ನಗರಾಭಿವೃದ್ದಿ ಪ್ರಾಧಿಕಾರದ ವಿರುದ್ಧವೂ ರೈತರು ವಿರೋಧ ವ್ಯಕ್ತಪಡಿಸಿದರು.