ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ಪರವಾಗಿ ವಾದಿಸಲು ತನ್ನನ್ನು ವಕೀಲರನ್ನಾಗಿ ನೇಮಕಗೊಳಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಲ್ ಸೋಮವಾರ ರಾತ್ರಿ ಸ್ಪಷ್ಟನೆ ನೀಡಿದ್ದಾರೆ.
ಸ್ವರಾಜ್ ಕೌಶಲ್ ಅವರನ್ನು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಾದಿಸಲು ನ್ಯಾಯವಾದಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಲಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು 1983ರಿಂದ 87ರವರೆಗೆ ಕರ್ನಾಟಕ ಪರ ವಕೀಲನಾಗಿ ಕಾರ್ಯನಿರ್ವಹಿಸಿದ್ದೇನೆ. ಹಾಗಿದ್ದ ಮೇಲೆ ಇದೀಗ ನಾನು ರಾಜ್ಯ ಪರ ವಕೀಲನಾಗಿ ನಿಯುಕ್ತಿಗೊಳ್ಳಲು ಒಪ್ಪುತ್ತೇನೆಯೇ?ಎಂದು ಕೌಶಲ್ ಪ್ರಶ್ನಿಸಿದ್ದಾರೆ.
ಕೌಶಲ್ ಅವರು ಮಿಜೋರಾಂ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಆ ನಿಟ್ಟಿನಲ್ಲಿ ಅವರು ಯಾವುದೇ ಸರ್ಕಾರಿ ಹುದ್ದೆಯನ್ನು ಅಲಂಕರಿಸುವುದು ಸಂವಿಧಾನ ವಿರೋಧಿಯಾಗಲಿದೆ.
ಸುಪ್ರೀಂಕೋರ್ಟ್‌ನಲ್ಲಿ ಪರಿಣತಿ ಹೊಂದಿರುವವರು ಅಥವಾ ಹೈಕೋರ್ಟ್‌ನ ಹಿರಿಯ ವಕೀಲರನ್ನು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯದ ಪರ ವಾದಿಸಲು ನೇಮಕ ಮಾಡುವುದು ವಾಡಿಕೆ. ಆದರೆ ಈ ರೀತಿಯ ಅನುಭವ ಇಲ್ಲದ ಸ್ವರಾಜ್ ಅವರನ್ನು ನೇಮಿಸಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಅಲ್ಲದೇ, ಡಿಸೆಂಬರ್ 5ರಂದು ರಾಜ್ಯ ಸರ್ಕಾರ ಸ್ವರಾಜ್ ಕೌಶಲ್ ಅವರನ್ನು ರಾಜ್ಯದ ಪರ ವಾದಿಸುವ ನ್ಯಾಯವಾದಿಯನ್ನಾಗಿ ನೇಮಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿತ್ತು.