ರೇಣುಕಾಚಾರ್ಯ ಭಿನ್ನಮತ ಸಭೆ ನಡೆಸಿಲ್ಲ,ಊಟಕ್ಕೆ ಹೋಗಿದ್ರು: ಸಿಎಂ
ಬೆಂಗಳೂರು, ಮಂಗಳವಾರ, 15 ಡಿಸೆಂಬರ್ 2009( 18:02 IST )
NRB
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಸೋಮವಾರ ಅತೃಪ್ತ ಶಾಸಕರ ಗುಂಪೊಂದು ನಗರದ ಹೊರವಲಯದ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿದ್ದರೆ, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಭಿನ್ನಮತವೂ ಇಲ್ಲ ಎಂಬುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೇಪೆ ಹಚ್ಚುವ ಹೇಳಿಕೆ ಕೊಟ್ಟಿದ್ದಾರೆ.
ಗೃಹಕಚೇರಿಯಲ್ಲಿ ಮಂಗಳವಾರ ಕೆಲವು ಸಚಿವರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಪಕ್ಷದಲ್ಲಿ ಭಿನ್ನಮತ ಇದೆ ಎಂಬುದು ಕೇವಲ ಊಹಾಪೋಹ. ಶಾಸಕರಾದ ರೇಣುಕಾಚಾರ್ಯ, ಬೇಳೂರು ಹಾಗೂ ಮತ್ತಿತರರು ಹೋಟೆಲ್‌ಗೆ ಊಟಕ್ಕೆ ಹೋಗಿದ್ದರೇ ಹೊರತು ಭಿನ್ನಮತ ಸಭೆ ನಡೆಸಲು ಅಲ್ಲ ಎಂದು ತಿಳಿಸಿದರು.
ಅವರೆಲ್ಲ ಹೋಟೆಲ್‌ಗೆ ಊಟಕ್ಕೆ ಹೋಗುವ ವಿಷಯವನ್ನು ನನಗೆ ತಿಳಿಸಿದ್ದರು. ಹೋಟೆಲ್‌ನಿಂದ ಹಿಂತಿರುಗಿ ಬಂದ ನಂತರವೂ ನನ್ನನ್ನು ಭೇಟಿಯಾಗಿ ಪಕ್ಷ ಹಾಗೂ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ. ಆದರೆ ಶಾಸಕರು ಹೋಟೆಲ್‌ಗೆ ಹೋಗಿರುವುದನ್ನೇ ದೊಡ್ಡದು ಮಾಡಿ,ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ ಎಂಬಂತೆ ಬಿಂಬಿಸಲಾಗಿದೆ. ಇವೆಲ್ಲ ಕೇವಲ ಊಹಾಪೋಹ ಎಂದರು.