ಯಾರನ್ನೂ ಸಂಪುಟದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ ಹಾಗೂ ಹೊಸಬರ ಸೇರ್ಪಡೆಯೂ ಇಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಂಡಾಯ ಶಾಸಕರ ಆಸೆಗೆ ಮತ್ತೆ ತಣ್ಣೀರೆರಚಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ರೇಣುಕಾಚಾರ್ಯ ಸೋಮವಾರ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಸಭೆ ನಡೆಸಿದ್ದರು. ಆದರೆ ಇದನ್ನು ಸಿಎಂ ಹಾಗೂ ರೇಣುಕಾಚಾರ್ಯ ಬಂಡಾಯಗಾರರ ಸಭೆ ಅಲ್ಲ ಎಂದು ಸ್ಫಷ್ಟನೆ ನೀಡಿದ್ದರು. ಅದರ ಬೆನ್ನಿಗೇ ಬುಧವಾರ ಸಿಎಂ ಅವರನ್ನು ಭೇಟಿಯಾದ ರೇಣುಕಾಚಾರ್ಯ, ತನಗೆ ಹಾಗೂ ತನ್ನೊಂದಿಗೆ ಮತ್ತಿಬ್ಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಡ ಹೇರಿದ್ದಾರೆನ್ನಲಾಗಿದೆ. ಏನೇ ಆದರೂ ವಿಧಾನಪರಿಷತ್ ಚುನಾವಣೆ ನಂತರ ಚರ್ಚಿಸೋಣ ಎಂದು ಮುಖ್ಯಮಂತ್ರಿಗಳು ಆಶ್ವಾಸನೆ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂಬುದಾಗಿಯೂ ಕಿವಿಮಾತು ಹೇಳಿದ್ದಾರೆನ್ನಲಾಗಿದೆ.
ಬಂಡಾಯ ಬಣದ ನೇತೃತ್ವ ವಹಿಸಿರುವ ರೇಣುಕಾಚಾರ್ಯ ಹಾಗೂ ಮತ್ತಿತರರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒಂದು ತಾಸಿಗೂ ಹೆಚ್ಚಿನ ಕಾಲ ಮಾತುಕತೆ ನಡೆಸಿದರು. ಸದ್ಯ ಸಂಪುಟದಲ್ಲಿ ಒಂದು ಸ್ಥಾನ ಮಾತ್ರ ಖಾಲಿಯಿದ್ದು, ಅದನ್ನು ತುಂಬಲು ತಾವು ಸಿದ್ಧರಿರುವುದಾಗಿ ಹೇಳಿದರೆಂದು ಮೂಲಗಳು ತಿಳಿಸಿವೆ.
ಉಳಿದಿರುವ ಒಂದು ಸಚಿವ ಸ್ಥಾನವನ್ನು ಯಾರಿಗೆ ನೀಡಬೇಕೆಂಬುದನ್ನು ನೀವೇ ನಿರ್ಧರಿಸಿ ಹೇಳಿ ಎಂದು ಸಿಎಂ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದರು ಎನ್ನಲಾಗಿದೆ.