ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಅಪಸ್ವರ; ಸ್ವಾಮೀಜಿಗಳಿಂದ ರಿಪೇರಿಗೆ ಮೂಹೂರ್ತ (Yediyurappa | Renukacharya | BJP | Karnataka)
Bookmark and Share Feedback Print
 
ಬಿಜೆಪಿಯ ಭಿನ್ನಮತವೆಂಬ ಸಾಂಕ್ರಾಮಿಕ ರೋಗಕ್ಕೆ ಈ ಬಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಚ್ಚಿನ ಮುಂಜಾಗ್ರತೆ ವಹಿಸಿ ಗಾಯ ವ್ರಣವಾಗದಂತೆ ನೋಡಿಕೊಂಡಿದ್ದಾರೆ. ಬಂಡಾಯವೆದ್ದಿರುವ ಶಾಸಕ-ಸಚಿವರನ್ನು ಭೇಟಿ ಸಂತೈಸಿದ್ದಲ್ಲದೆ, ಸ್ವಾಮೀಜಿಗಳ ಮಧ್ಯಸ್ಥಿಕೆಯಲ್ಲಿ ಪರಿಹಾರ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.

ಡಿಸೆಂಬರ್ 20ರಂದು ಸಿದ್ಧಗಂಗಾ ಅಥವಾ ಸುತ್ತೂರು ಶ್ರೀಗಳ ಮಧ್ಯಸ್ಥಿಕೆಯಲ್ಲಿ ಭಿನ್ನರೊಂದಿಗೆ ಯಡಿಯೂರಪ್ಪ ಮಾತುಕತೆ ನಡೆಸಲಿದ್ದು, ಸ್ವಾಮೀಜಿಗಳು ನೀಡುವ ಸಲಹೆಗಳನ್ನು ತಾವು ಒಪ್ಪಿಕೊಳ್ಳಲು ಸಿದ್ಧ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದ ಭಿನ್ನಮತೀಯರು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಹೊನ್ನಾಳಿ ಶಾಸರೇಣುಕಾಚಾರ್ಯ, ಗೋಪಾಲಕೃಷ್ಣ ಬೇಳೂರು ಮತ್ತು ಎಸ್.ಕೆ. ಬೆಳ್ಳುಬ್ಬಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬುವುದು ಬಂಡಾಯವೆದ್ದಿರುವ ಗುಂಪಿನ ಮಹತ್ವದ ಬೇಡಿಕೆ. ಇದು ಸದ್ಯಕ್ಕೆ ಅಸಾಧ್ಯವೆಂಬ ಸಂಕೇತವನ್ನು ಅತ್ತ ಯಡಿಯೂರಪ್ಪನವರೂ ರವಾನಿಸಿದ್ದರಾದರೂ, ಖಾಲಿಯಿರುವ ಸಂಪುಟ ಸ್ಥಾನವೊಂದನ್ನು ರೇಣುಕಾಚಾರ್ಯರಿಗೆ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರೆಡ್ಡಿ ಪಾಳಯದ ನಿರ್ಲಕ್ಷಿತ ಗುಂಪಿನಲ್ಲಿ ಅತೃಪ್ತಿಯ ಹೊಗೆ ಕಾಣಿಸಿಕೊಂಡ ಬೆನ್ನಿಗೆ ಇದನ್ನು ಗಂಭೀರವಾಗಿ ಪರಿಗಣಿಸಿದ ಯಡಿಯೂರಪ್ಪನವರು ಮಂಗಳವಾರ ರಾತ್ರಿಯೇ ನಿಗೂಢ ಸ್ಥಳವೊಂದರಲ್ಲಿ ಭಿನ್ನರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸುತ್ತೂರು ಮತ್ತು ಸಿದ್ಧಗಂಗಾ ಮಠಾಧೀಶರು ಸ್ಥಳದಲ್ಲಿದ್ದರು ಎಂದು ಹೇಳಲಾಗಿದೆ. ಅದಕ್ಕೂ ಮೊದಲು ಯಡಿಯೂರಪ್ಪನವರು ಆರೆಸ್ಸೆಸ್ ಮುಖಂಡರು ಹಾಗೂ ಕೆಲ ಪ್ರಮುಖ ಸಚಿವರುಗಳೊಂದಿಗೆ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದ್ದರು.

ಯಾವುದೇ ಎಗ್ಗಿಲ್ಲದೆ ತಮ್ಮ ಅಸಮಾಧಾನವನ್ನು ಹೊರಗೆಡವಿದ ಅತೃಪ್ತ ಸಚಿವರು-ಶಾಸಕರು, ಬೇಡಿಕೆಗಳ ಪಟ್ಟಿಯನ್ನೂ ಮುಖ್ಯಮಂತ್ರಿಯವರ ಮುಂದಿಟ್ಟರು. ಇದರಲ್ಲಿ ಮೈಸೂರಿನ ಶಾಸಕ ರಾಮದಾಸ್‌ರವರಿಗೆ ಸಚಿವ ಸ್ಥಾನ ನೀಡಬೇಕೆನ್ನುವ ಪ್ರಸ್ತಾಪವೂ ಇತ್ತು.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಆರ್. ಅಶೋಕ್ ಸರಕಾರದಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಿರುವುದು ಕೂಡ ಹೊನ್ನಾಳಿ ನೇತೃತ್ವದ ಗುಂಪಿಗೆ ಅಸಹನೀಯವಾಗಿದೆ. ಈ ಹಿಂದೆ ಶೋಭಾ ಕರಂದ್ಲಾಜೆಯವರಿಗೆ ಒದಗಿಸಿದ ಸ್ಥಿತಿಯನ್ನೇ ಇವರಿಬ್ಬರಿಗೂ ತರುವುದು ಕೂಡ ಭಿನ್ನರ ಉದ್ದೇಶ ಎಂದು ಹೇಳಲಾಗುತ್ತಿದೆ.

ಎಲ್ಲವನ್ನೂ ನಿಧಾನವಾಗಿ ಆಲಿಸಿದ ಯಡಿಯೂರಪ್ಪ, ಹೊಸ ವರ್ಷದಲ್ಲಿ ನಿಮಗೆ ಶುಭಸುದ್ದಿ ನೀಡುತ್ತೇನೆ. ನೀವು ಸೂಚಿಸಿದ ಎಲ್ಲರಿಗೂ ಸಚಿವಗಿರಿ ನೀಡಲಾಗದು. ಆದರೆ ಒಂದಿಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತೇನೆ. ಉಳಿದವರಿಗೆ ನಿಗಮ-ಮಂಡಳಿಗಳಲ್ಲಿ ಸೂಕ್ತ ಸ್ಥಾನವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಕೇವಲ ಭರವಸೆಗಳಿಗೆ ತಣ್ಣಗಾಗದ ಭಿನ್ನರು ಮಾತು ತಪ್ಪಿದರೆ ರಾಜಿನಾಮೆಗೂ ಹಿಂದೇಟು ಹಾಕುವುದಿಲ್ಲ ಎಂಬ ಪರೋಕ್ಷ ಬೆದರಿಕೆಯನ್ನೂ ಇದೇ ಸಂದರ್ಭದಲ್ಲಿ ಹಾಕಿದ್ದಾರೆ. ಅದಕ್ಕಾಗಿ ಮತ್ತೊಂದು ಸುತ್ತಿನ ಮಾತುಕತೆಯನ್ನು ಡಿಸೆಂಬರ್ 20 ಅಥವಾ 21ರಂದು ನಡೆಸುವ ತೀರ್ಮಾನಕ್ಕೆ ಬರಲಾಗಿದೆ.

ಸರಕಾರದಲ್ಲಿನ ಅತೃಪ್ತಿಯ ಲಾಭ ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೆ ಯಾವುದೇ ಅವಕಾಶವನ್ನು ನೀಡಬಾರದು ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ಸರಕಾರದ ಭವಿಷ್ಯ ನಿಂತಿದೆ.
ಸಂಬಂಧಿತ ಮಾಹಿತಿ ಹುಡುಕಿ