ರಾಜ್ಯದಲ್ಲಿನ 18ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳ ತನಿಖೆ ನಡೆಸಿರುವ ಐಬಿಎಂ(ಇಂಡಿಯನ್ ಬ್ಯೂರೋ ಆಫ್ ಮೈನ್ಸ್)ಟಾಸ್ಕ್ ಫೋರ್ಸ್ 5ಕಂಪನಿಗಳನ್ನು ಶೀಘ್ರವೇ ಮುಚ್ಚುವಂತೆ ಶಿಫಾರಸು ಮಾಡಿರುವ ವರದಿಯನ್ನು ಬುಧವಾರ ರಾತ್ರಿ ಕೇಂದ್ರ ಗಣಿ ಸಚಿವಾಲಯಕ್ಕೆ ಸಲ್ಲಿಸಿದೆ.
ಐಬಿಎಂ ತನಿಖೆ ನಡೆಸಿರುವ ಪ್ರಕಾರ ಹತ್ತು ಕಂಪನಿಗಳು ನಿಯಮಗಳನ್ನು ಉಲ್ಲಂಘಿಸಿರುವುದನ್ನು ಪತ್ತೆ ಹಚ್ಚಿರುವುದಾಗಿ ಹೇಳಿದೆ. ರೆಡ್ಡಿ ಸಹೋದರರ ಗಣಿಗಳಿರುವ ಆಂಧ್ರಪ್ರದೇದಲ್ಲಿ ಹನ್ನೊಂದು ಗಣಿಗಳ ತನಿಖೆ ನಡೆಸಿರುವ ಐಬಿಎಂ ಎಂಟ ಗಣಿಗಳಲ್ಲಿ ನಿಯಮ ಉಲ್ಲಂಘಿಸಿರುವುದನ್ನೂ ಪತ್ತೆ ಮಾಡಿದೆ. ಆದರೆ ಈ ಗಣಿಗಳು ಯಾರ ಒಡೆತನಕ್ಕೆ ಸೇರಿದವು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.
ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕೇಂದ್ರ ಗಣಿಗಾರಿಕೆ ಸಚಿವಾಲಯ ಡಿ.1ರಂದು ಐಬಿಎಂ ಕಾರ್ಯದಳ ರಚಿಸಿತ್ತು.ಏತನ್ಮಧ್ಯೆ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ನಡೆಸುತ್ತಿರುವ ತನಿಖೆ ವಿರುದ್ಧ ಆಂಧ್ರಪ್ರದೇಶ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ಆಂಧ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.