ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪಿ.ಡಿ.ದಿನಕರನ್ ಅವರ ನ್ಯಾಯಾಲಯದ ಕಲಾಪ ರದ್ದುಗೊಂಡಿದೆ. ಈ ಬಗ್ಗೆ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಈ ಬಗ್ಗೆ ರಾಜ್ಯ ಹೈಕೋರ್ಟ್ ಬುಧವಾರ ಅಧಿಸೂಚನೆ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಬರುವ ಪ್ರಕರಣಗಳನ್ನು ನ್ಯಾ.ವಿ.ಗೋಪಾಲಗೌಡ ನೇತೃತ್ವದ 2ನೇ ನ್ಯಾಯಪೀಠ ವಿಚಾರಣೆ ನಡೆಸಲಿದೆ.
ಮುಂದಿನ ನಿರ್ದೇಶನ ಬರುವವರೆಗೆ ಪಿ.ಡಿ.ದಿನಕರನ್ ಅವರು ಹೈಕೋರ್ಟ್ ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಬುಧಿಹಾಳ್ ಅವರು ಬುಧವಾರ ಆನ್‌ಲೈನ್ ಪ್ರಕಟಣೆಯನ್ನು ಹೊರಡಿಸಿದ್ದರು. ಆರೋಪ ಎದುರಿಸುತ್ತಿರುವ ಮು.ನ್ಯಾ.ದಿನಕರನ್ ಅವರು ಕಳೆದ ಒಂದು ವಾರದಿಂದ ಕಲಾಪದಿಂದ ದೂರ ಉಳಿದಿದ್ದರು.
ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಮುಖ್ಯನ್ಯಾಯಾಧೀಶ ದಿನಕರನ್ ಹೆಸರನ್ನು ಸುಪ್ರೀಂಕೋರ್ಟ್‌ಗೆ ನೇಮಕ ಮಾಡಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಸಮಿತಿ ಮಾಡಿದ್ದ ಶಿಫಾರಸ್ಸನ್ನು ಕೇಂದ್ರ ಕಾನೂನು ಇಲಾಖೆ ತಿರಸ್ಕರಿಸಿತ್ತು.
ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಮು.ನ್ಯಾ.ದಿನಕರನ್ ಅವರನ್ನು ವಜಾಗೊಳಿಸುವಂತೆ ಕೋರಿ ಸೋಮವಾರ ರಾಜ್ಯಸಭೆಯಲ್ಲಿ ಬಿಜೆಪಿ, ಎಡಪಕ್ಷದ 76ಸದಸ್ಯರು ಮಹಾಭಿಯೋಗಕ್ಕೆ ಮನವಿ ಸಲ್ಲಿಸಿದ್ದರು.