ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಪಕ್ಷ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ:ರೇಣುಕಾಚಾರ್ಯಗೆ ಸಚಿವಪಟ್ಟ? (Karnataka | Yeddyurappa | Renukacharya | Janardhana Redddy)
Bookmark and Share Feedback Print
 
NRB
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಭದ್ರಗೊಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ನಡೆಸಿರುವ ತಂತ್ರವನ್ನು ವಿಫಲಗೊಳಿಸಲು ಬಿಜೆಪಿ ನಾಯಕರೂ ಕೂಡ ಪ್ರತಿತಂತ್ರ ರೂಪಿಸಿದ್ದಾರೆ.

ರೆಡ್ಡಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಭಿನ್ನಮತೀಯ ಶಾಸಕರ ನಾಯಕ ಹೊನ್ನಾಳಿ ರೇಣುಕಾಚಾರ್ಯ ಅವರನ್ನು ಸಚಿವರನ್ನಾಗಿ ನೇಮಿಸಿ ಕೆಲ ಶಾಸಕರಿಗೆ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರವನ್ನು ಸದೃಢಗೊಳಿಸಲು ಬಿಜೆಪಿ ನಾಯಕರು ಕಾರ್ಯೋನ್ಮುಖರಾಗಿದ್ದಾರೆ ಎಂದು ಮೂಲವೊಂದು ಹೇಳಿದೆ.

ಡಿ.21ರೊಳಗೆ ಶಾಸಕ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ನೀಡಿ, ಬಜೆಟ್ ಅಧಿವೇಶನದ ನಂತರ ಸಚಿವ ಸಂಪುಟ ಪುನಾರಚಿಸಿ ಕೆಲ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಭಿನ್ನಮತೀಯ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪನವರು ಆಶ್ವಾಸನೆ ಕೊಟ್ಟಿದ್ದಾರೆನ್ನಲಾಗಿದೆ.

ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ರೇಣುಕಾಚಾರ್ಯ ಸೋಮವಾರ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಸಭೆ ನಡೆಸಿದ್ದರು. ಆದರೆ ಇದನ್ನು ಸಿಎಂ ಹಾಗೂ ರೇಣುಕಾಚಾರ್ಯ ಬಂಡಾಯಗಾರರ ಸಭೆ ಅಲ್ಲ ಎಂದು ಸ್ಫಷ್ಟನೆ ನೀಡಿದ್ದರು. ಅದರ ಬೆನ್ನಿಗೇ ಬುಧವಾರ ಸಿಎಂ ಅವರನ್ನು ಭೇಟಿಯಾದ ರೇಣುಕಾಚಾರ್ಯ, ತನಗೆ ಹಾಗೂ ತನ್ನೊಂದಿಗೆ ಮತ್ತಿಬ್ಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಡ ಹೇರಿದ್ದಾರೆನ್ನಲಾಗಿದೆ. ಏನೇ ಆದರೂ ವಿಧಾನಪರಿಷತ್ ಚುನಾವಣೆ ನಂತರ ಚರ್ಚಿಸೋಣ ಎಂದು ಮುಖ್ಯಮಂತ್ರಿಗಳು ಆಶ್ವಾಸನೆ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂಬುದಾಗಿಯೂ ಕಿವಿಮಾತು ಹೇಳಿದ್ದಾರೆನ್ನಲಾಗಿದೆ.

ಬಂಡಾಯ ಬಣದ ನೇತೃತ್ವ ವಹಿಸಿರುವ ರೇಣುಕಾಚಾರ್ಯ ಹಾಗೂ ಮತ್ತಿತರರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒಂದು ತಾಸಿಗೂ ಹೆಚ್ಚಿನ ಕಾಲ ಮಾತುಕತೆ ನಡೆಸಿದ್ದರು. ಸದ್ಯ ಸಂಪುಟದಲ್ಲಿ ಒಂದು ಸ್ಥಾನ ಮಾತ್ರ ಖಾಲಿಯಿದ್ದು, ಅದನ್ನು ತುಂಬಲು ತಾವು ಸಿದ್ಧರಿರುವುದಾಗಿ ಹೇಳಿದರೆಂದು ಮೂಲಗಳು ತಿಳಿಸಿವೆ.

ಆಡಳಿತಾರೂಢ ಬಿಜೆಪಿ ಸರ್ಕಾರ ಉರುಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಒಳಸಂಚು ನಡೆಸುತ್ತಿದ್ದಾರೆನ್ನಲಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಜ್ಯದ ಜನತೆಗೆ ಶೀಘ್ರವೇ ಸಿಹಿ ಸುದ್ದಿ ಲಭಿಸಲಿದೆ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ