ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಂಡ ಆಟೋವನ್ನು ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ ಹಾಗೂ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ನಗರದ ಇನ್ಸ್‌ಪೆಕ್ಟರ್ ಒಬ್ಬರನ್ನು ಪೊಲೀಸ್ ಆಯುಕ್ತರು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ನಗರದ ವಿವಿಐಪಿ ಭದ್ರತೆ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಎಚ್.ಟಿ ಜಯರಾಮಯ್ಯ ವಜಾಗೊಂಡ ಅಧಿಕಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಯರಾಮಯ್ಯ 2008ರಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ಸಂಬಂಧ ವಶಪಡಿಸಿಕೊಳ್ಳಲಾದ ಆಟೋ ರಿಕ್ಷಾವೊಂದನ್ನು ಅದರ ಮಾಲೀಕರಿಗೆ ಒಪ್ಪಿಸದೆ ಮಾರಿಬಿಟ್ಟಿದ್ದರು. ಅಲ್ಲದೆ, ಠಾಣೆಯ ಕಟ್ಟಡ ಹಾಗೂ ಕಾಂಪೌಂಡ್ ರಗಳೆ ನೀಡುತ್ತಿವೆ ಎಂದು ಪಕ್ಕದ ನಿವೇಶನದವರು ಠಾಣೆಯ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ ಜೆಸಿಬಿಗಳ ಮೂಲಕ ಗೋಡೆಗಳನ್ನು ಕೆಡವಿ ಕಾಂಪೌಂಡ್ ಒಳಗಿದ್ದ ತೆಂಗಿನ ಮರಗಳನ್ನು ಹಾಗೂ ಹೂ ತೋಟವನ್ನು ನಾಶಪಡಿಸಿದ್ದರು. ಆದರೆ, ಜಯರಾಮಯ್ಯ ಮಾತ್ರ ಅದನ್ನು ತಡೆಯದೇ,ಮೇಲಾಧಿಕಾರಿಗಳಿಗೂ ವಿಷಯ ಮುಟ್ಟಿಸದೆ ನಿರ್ಲಕ್ಷ್ಯತೆ ವಹಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.