ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆದರಿಕೆಗೆ ಸೊಪ್ಪು ಹಾಕಲ್ಲ: ರೇಣುಕಾಚಾರ್ಯಗೆ ಡಿ.ವಿ. ಎಚ್ಚರಿಕೆ (Sadananda gowda | Renukacharya | BJP | Yeddyurappa | Congress)
ಬೆದರಿಕೆಗೆ ಸೊಪ್ಪು ಹಾಕಲ್ಲ: ರೇಣುಕಾಚಾರ್ಯಗೆ ಡಿ.ವಿ. ಎಚ್ಚರಿಕೆ
ಮಂಗಳೂರು, ಗುರುವಾರ, 17 ಡಿಸೆಂಬರ್ 2009( 15:52 IST )
'
NRB
ಪಕ್ಷದ ಕೆಲವು ಶಾಸಕರು ಗುಪ್ತ ಸಭೆಗಳನ್ನು ನಡೆಸುತ್ತಿರುವ ಕುರಿತು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ. ಆದರೆ ಪಕ್ಷ ಇಂತಹ ಬೆದರಿಕೆ, ಬ್ಲ್ಯಾಕ್‌ಮೇಲ್‌ಗಳಿಗೆ ಸೊಪ್ಪು ಹಾಕುವುದಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ರೇಣುಕಾಚಾರ್ಯ ನೇತೃದ ಬಂಡಾಯ ಶಾಸಕರ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ, ಒಂದು ವೇಳೆ ಯಾರಿಗಾದರು ಅಸಮಾಧಾನ ಇದ್ದರೆ ಅದನ್ನು ಡಿ.18ರ ನಂತರ ಅವರನ್ನು ಕರೆದು ಮಾತುಕತೆ ನಡೆಸುವುದಾಗಿ ಹೇಳಿದರು.
ಆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಕಾರ್ಯವಾಗಲಿ, ಬಂಡಾಯ ಸಭೆಗಳನ್ನು ನಡೆಸಿದರೆ ಅದಕ್ಕೆ ಸೊಪ್ಪು ಹಾಕುವುದಿಲ್ಲ. ಕೇವಲ ಅಧಿಕಾರಕ್ಕಾಗಿಯೇ ಅಂತಹ ತಂತ್ರಗಳನ್ನು ಪ್ರಯೋಗಿಸಿದರೆ ಅಂತಹ ಶಾಸಕರ ವಿರುದ್ಧ ಏನು ಮಾಡಬೇಕು ಎಂಬುದು ನಮಗೆ ತಿಳಿದಿದೆ ಎಂದು ಖಾರವಾಗಿ ನುಡಿದರು.
ಪಕ್ಷದ ಚೌಕಟ್ಟು, ಶಿಸ್ತನ್ನು ಉಲ್ಲಂಘಿಸಿ ನಮ್ಮ ವ್ಯಾಪ್ತಿಯೊಳಗೆ ಬಾರದಿದ್ದಲ್ಲಿ ಅವರಿಗೆ ಏನು ಮಾಡಬೇಕೋ ಆ ವ್ಯವಸ್ಥೆ ಮಾಡುತ್ತೇವೆ. ಎಲ್ಲದಕ್ಕೂ ಒಂದು ಇತಿ-ಮಿತಿ ಇದೆ. ಅದನ್ನು ಬಿಟ್ಟು ಅಧಿಕಾರಕ್ಕಾಗಿ ಹಪಹಪಿಸಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ರೆ ಎಚ್ಚರ ಎಂದು ಬಂಡಾಯದ ಕಹಳೆ ಮುಂದುವರಿಸಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ಧ ಗುಡುಗಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಹತ್ತಕ್ಕೂ ಅಧಿಕ ಮಂದಿ ಶಾಸಕರು ಇತ್ತೀಚೆಗಷ್ಟೇ ನಗರದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಗುಪ್ತ ಸಭೆ ನಡೆಸಿದ್ದರು. ಅಲ್ಲದೇ, ತನಗೆ ಮತ್ತು ತನ್ನ ಹಿಂಬಾಲಕರಿಗೂ ಸಚಿವ ಸ್ಥಾನ ನೀಡಬೇಕು, ಇಲ್ಲದಿದ್ದಲ್ಲಿ ಪಕ್ಷದಿಂದ ಹೊರಹೋಗುವುದಾಗಿ ಮುಖ್ಯಮಂತ್ರಿಗಳಿಗೆ ಮುನ್ನೆಚ್ಚರಿಕೆ ನೀಡಿದ್ದಾರೆನ್ನಲಾಗಿದೆ.