ವಿಧಾನಪರಿಷತ್ ಚುನಾವಣೆ ನಂತರ ಆಡಳಿತಾರೂಢ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಬುಧವಾರ ಭವಿಷ್ಯ ನುಡಿದ್ದಾರೆ.
ಹಳಿಯಾಳ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನಕ್ಕೆ ಕಾಂಗ್ರೆಸ್ ಕೈಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ತನ್ನ ಶಾಸಕರ ಬಿಕ್ಕಟ್ಟಿನಿಂದಾಗಿ ಬಿಜೆಪಿ ಸರ್ಕಾರ ಉರುಳಲಿದೆ ಎಂದರು. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಸುಭದ್ರ ಹಾಗೂ ಅಭಿವೃದ್ಧಿ ಪರ ಆಡಳಿತ ನೀಡಬಲ್ಲದು ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದರು. ಇದನ್ನು ಮತದಾರರು ಕೂಡ ಮನಗಂಡಿರುವುದಾಗಿ ನುಡಿದರು.
122 ಮಂದಿ ಶಾಸಕರ ಬೆಂಬಲ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸದಾ ಭಯದ ನೆರಳಿನಲ್ಲಿಯೇ ಆಡಳಿತ ನಡೆಸುವಂತಾಗಿದೆ. ಅದು ತನ್ನದೇ ಬಿಕ್ಕಟ್ಟಿನಿಂದಲೇ ಬಹುಮತವನ್ನು ಕಳೆದುಕೊಳ್ಳಲಿದೆ ಎಂದರು. ಈ ಮೊದಲು ಯೆಡ್ಡಿ-ರೆಡ್ಡಿ ಬಣವಾಗಿದ್ದ ಬಿಜೆಪಿಯಲ್ಲಿ ಈಗ ಮತ್ತೊಂದು ಗುಂಪು (ರೇಣುಕಾಚಾರ್ಯ) ಅಸಮಾಧಾನ ಹೊರಹಾಕತೊಡಗಿದ್ದು, ಇದೇ ಅವರಿಗೆ ಮುಳುವಾಗಲಿದೆ ಎಂದು ವಿವರಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ ರೆಸಾರ್ಟ್ ರಾಜಕೀಯ ಮುಂದುವರಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಕ್ಕೆ ಅಪಚಾರ ಎಸಗಿದೆ ಎಂದು ದೂರಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.