ದೇವೇಗೌಡರು ಬಿಜೆಪಿ ಭದ್ರವಾಗಿದೆ ಎಂದು ಇತ್ತೀಚೆಗೆ ಹೇಳಿದ್ದನ್ನೇ ಕುಮಾರಸ್ವಾಮಿ 'ಸಿಹಿ ಸುದ್ದಿ ಇದೆ' ಎಂದು ಹೇಳಿಕೊಂಡು ತಿರುಗಾಡುತ್ತಿರಬಹುದು; ಇದನ್ನು ನಂಬಿದ ಸಿದ್ದರಾಮಯ್ಯನವರು ಹಗಲು ಕನಸು ಕಾಣುತ್ತಿದ್ದಾರೆ, ಕಾಣಲಿ-- ನಮ್ಮಿಂದ ಅದಕ್ಕೆ ಅಡ್ಡಿಯೇನಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ಬಿಜೆಪಿ ಸರಕಾರ ಭದ್ರವಾಗಿದ್ದು, ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಸಹಜವಾಗಿ ಕೆಲವರು ಸಚಿವ ಸ್ಥಾನಾಕಾಂಕ್ಷಿಗಳಿರಬಹುದು, ಆದರೆ ಸದ್ಯಕ್ಕೆ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಅತೃಪ್ತ ಶಾಸಕರಿಗೆ ಇದೇ ಸಂದರ್ಭದಲ್ಲಿ ತನ್ನ ಸ್ಪಷ್ಟ ನಿಲುವನ್ನು ತಿಳಿಸಿದರು.
ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಸಾಗುತ್ತಿರುವಾಗ ಸಂಪುಟ ವಿಸ್ತರಣೆ ಪ್ರಶ್ನೆಯೇ ಬರುವುದಿಲ್ಲ. ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಚಿವ ಸ್ಥಾನದ ಆಸೆಯಲ್ಲಿರಬಹುದು. ಆದರೆ ಅದು ಸದ್ಯಕ್ಕೆ ಅಸಾಧ್ಯ. ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲಾಗುತ್ತದೆ. ಯಾರದೇ ವೈಯಕ್ತಿಕ ಬೇಡಿಕೆಗಳಿಗೆ ಮಣೆ ಹಾಕುವುದಿಲ್ಲ ಎಂದರು.
ಅದೇ ಹೊತ್ತಿಗೆ ಪ್ರತಿಪಕ್ಷಗಳ ರಾಜಕಾರಣದ ಕುರಿತು ಗೇಲಿ ಮಾಡಿದ ಅವರು, ಕುಮಾರಸ್ವಾಮಿಯವರು ಸಿಹಿಸುದ್ದಿಯಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಹುಶಃ ಅವರ ತಂದೆ ದೇವೇಗೌಡ ಕೆಲ ದಿನಗಳ ಹಿಂದೆ ನೀಡಿದ್ದ ಹೇಳಿಕೆಯನ್ನೇ (ಬಿಜೆಪಿ ಭದ್ರವಾಗಿದೆ) ಅವರು ಉಲ್ಲೇಖಿಸುತ್ತಿರಬಹುದು ಎಂದು ಮುಖ್ಯಮಂತ್ರಿ ಕುಟುಕಿದರು.
ಇಂತಹ ವರದಿಗಳನ್ನೇ ಸತ್ಯವೆಂದು ನಂಬಿದ ಕಾಂಗ್ರೆಸ್‌ನ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗೋ ಹಗಲುಗನಸು ಕಾಣುತ್ತಿದ್ದಾರೆ. ಇದಕ್ಕೆ ನಮ್ಮಿಂದ ಅಡ್ಡಿಯೇನಿಲ್ಲ. ಆದರೆ ಗೌಡರು ಮತ್ತೆ ತನ್ನ ಹೇಳಿಕೆ ಬದಲಾಯಿಸಿರುವುದನ್ನು ಅವರು ಗಮನಿಸಿಲ್ಲವೆಂದು ಕಾಣುತ್ತದೆ. ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಬೆಂಕಿಗೆ ತುಪ್ಪ ಸುರಿದರು ಯಡಿಯೂರಪ್ಪ.
ತಮ್ಮ ಸರಕಾರಕ್ಕೆ ಯಾರಿಂದಲೂ ಬೆದರಿಕೆಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಕಾಂಗ್ರೆಸ್-ಜೆಡಿಎಸ್ ಒಂದಾಗಿ ಸರಕಾರ ಮಾಡುವ ಸಾಧ್ಯತೆಗಳೇ ಇಲ್ಲ. ಅಂತಹ ಪರಿಸ್ಥಿತಿ ಉದ್ಭವಿಸದು. ಹಬ್ಬಿರುವುದು ಏನಿದ್ದರೂ ಗಾಳಿ ಸುದ್ದಿ ಮಾತ್ರ ಎಂದರು.