ಆಸೆ, ಆಮೀಷಗಳನ್ನು ಒಡ್ಡುವ ಮೂಲಕ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ವಿಧಾನಪರಿಷತ್ ಚುನಾವಣೆಯ ಮತದಾನ ಶುಕ್ರವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಕಣದಲ್ಲಿದ್ದ 93ಅಭ್ಯರ್ಥಿಗಳ ಭವಿಷ್ಯ ಈಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ರಾಜ್ಯದ 23ಕ್ಷೇತ್ರಗಳ 93ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಆಯಾ ಜಿಲ್ಲಾ ಕೇಂದ್ರಗಳಲ್ಲಿ ಡಿ.21ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಘೋಷಣೆಯಾಗಲಿದೆ.
ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯಲ್ಲಿ ಬೆಳಿಗ್ಗಿನಿಂದಲೇ ಚುರುಕಿನ ಮತದಾನ ಆರಂಭಗೊಂಡಿದ್ದು,ಒಟ್ಟು ಶೇ.80ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಾಥಮಿಕ ವರದಿ ತಿಳಿಸಿದೆ.
ರಾಜಕೀಯ ಕೆಸರೆರಚಾಟ ಹಾಗೂ ಅಭ್ಯರ್ಥಿಗಳ ಆಮೀಷದ ಕರಿನೆರಳಲ್ಲಿ ನಡೆದಿರುವ ಮತದಾನ ತೀವ್ರ ಕುತೂಹಲ ಕೆರಳಿಸಿದೆ. ಏತನ್ಮಧ್ಯೆ ದಕ್ಷಿಣ ಕನ್ನಡದಿಂದ ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಕುಂದಾಪುರದಿಂದ ಕಾಂಗ್ರೆಸ್‌ನ ಪ್ರತಾಪ್ ಚಂದ್ರ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಒಟ್ಟು 25ಕ್ಷೇತ್ರಗಳಲ್ಲಿ ಇಂದು 23ಕ್ಷೇತ್ರಗಳಿಗೆ ಮತದಾನ ನಡೆಯಿತು.
ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 8ಕ್ಷೇತ್ರಗಳಿಗೆ ಹಾಗೂ ಕಾಂಗ್ರೆಸ್ 17ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಎಲ್ಲ ಸ್ಥಳೀಯ ಸಂಸ್ಥೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 93,673 ಮಂದಿ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಅತಿ ಹೆಚ್ಚು 9,273 ಮತದಾರರು ಬೆಳಗಾವಿಯಲ್ಲಿ, ಅತಿ ಕಡಿಮೆ ಮತದಾರರು 1,388 ಕೊಡಗು ಕ್ಷೇತ್ರದಲ್ಲಿದ್ದರು.
ಬಿಜಾಪುರ, ಬೆಳಗಾವಿ, ಧಾರವಾಡ, ಮೈಸೂರಿನ ತಲಾ ಎರಡು ಕ್ಷೇತ್ರಗಳಿಗೆ, ಕೊಡಗು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಉತ್ತರ ಕನ್ನಡ, ಗುಲ್ಬರ್ಗಾ ಹಾಗೂ ಬೀದರ್‌ಗಳಲ್ಲಿ ತಲಾ ಒಂದು ಸ್ಥಾನಗಳಿಗೆ ಇಂದು ಮತದಾನ ನಡೆಯಿತು.
ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ, ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜೆಡಿಎಸ್‌ನ ಎಚ್.ಡಿ.ರೇವಣ್ಣ, ಸಂಸದ ಜನಾರ್ದನ ಸ್ವಾಮಿ, ಸಚಿವ ಬಚ್ಚೇಗೌಡ, ಸಚಿವ ಕೆ.ಎಸ್.ಈಶ್ವರಪ್ಪ, ಯೋಜನಾ ಆಯೋಗದ ಉಪಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಸೇರಿದಂತೆ ಹಲವು ಘಟಾನುಘಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದರು.
ಮತದಾನ ಬಹಿಷ್ಕಾರ: ಆಸಂಗಿ,ಮಲಂಗಾಣ ಗ್ರಾಮ ಪಂಚಾಯ್ತಿಯ 14ಮಂದಿ ಸದಸ್ಯರು ಮತದಾನವನ್ನು ಬಹಿಷ್ಕರಿಸುವ ಘಟನೆ ಕೂಡ ನಡೆದಿದೆ. ತಮ್ಮ ಗ್ರಾಮಕ್ಕೆ ಜಾರಿಯಾಗಬೇಕಿದ್ದ ಯೋಜನೆಯೊಂದು ಜಾರಿಯಾಗದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿರುವುದಾಗಿ ಸದಸ್ಯರು ತಿಳಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಮತದಾನ ಬಹಿಷ್ಕರಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.