ಅಧಿಕಾರದ ಹಗಲುಗನಸು ಕಾಣುತ್ತಿರುವ ವಿಪಕ್ಷಗಳ ವಿರುದ್ಧ ಕಿಡಿಕಾರಿರುವ ವಾರ್ತಾ ಹಾಗೂ ಅಬಕಾರಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮತ್ತೊಮ್ಮೆ ಮೋಸದ ಕೆಲಸಕ್ಕೆ ಕೈಹಾಕಬೇಡಿ, ನಿಮ್ಮ ಕುತಂತ್ರ ಫಲಿಸದು ಎಂದು ಜೆಡಿಎಸ್ಗೆ ತಿರುಗೇಟು ನೀಡಿದ್ದಾರೆ.
ಈ ಸರ್ಕಾರ ಪತನವಾಗಲಿ ಎಂದು ಕೆಲವರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಆದರೆ ಆಡಳಿತರೂಢ ಬಿಜೆಪಿ ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಒಮ್ಮೆ ಮೋಸ ಮಾಡಿದ್ದು ಸಾಕು, ಮತ್ತೊಮ್ಮೆ ಮೋಸ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ, ಸರ್ಕಾರ ಉರುಳಿಸುವ ಕುತಂತ್ರ ಫಲಿಸದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಪ್ರಸ್ತಾಪಿಸದೆ ಟೀಕಿಸಿದ್ದಾರೆ.
ಬಿಜೆಪಿಗೆ ಮೋಸ ಮಾಡಿದ್ದಕ್ಕೆ ಜನರೇ ಸೂಕ್ತ ಪಾಠ ಕಲಿಸಿದ್ದಾರೆ. ಜನರ ತೀರ್ಪಿಗೆ ತಲೆಬಾಗಿ ಜನರಿಂದ ತಿರಸ್ಕೃತಗೊಂಡ ನಂತರವೂ ಈ ನಾಯಕರಿಗೆ ಬುದ್ಧಿ ಬಂದಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಆಂತರಿಕ ವಿಚಾರದಲ್ಲಿ ವಿನಾಕಾರಣ ಮೂಗು ತೂರಿಸುವ ಪ್ರವೃತ್ತಿಯನ್ನು ನಿಲ್ಲಿಸಿದರೆ ಅವರಿಗೆ ಒಳ್ಳೆಯದು. ಇಲ್ಲದಿದ್ದರೆ, ಜನರು ಮತ್ತೊಮ್ಮೆ ಬುದ್ಧಿ ಕಲಿಸಲಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.