ಆಡಳಿತಾರೂಢ ಬಿಜೆಪಿಯಲ್ಲಿನ ಕೆಲವು ಮುಖಂಡರಿಗೆ ಹಣದ ಮದ ಎಂದು ಗಂಭೀರವಾಗಿ ಆರೋಪಿಸಿರುವ ಮಾಡಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಿಜೆಪಿ ಸರ್ಕಾರ ಪತನವಾಗಲೇಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಂವಿಧಾನ ವಿರೋಧಿಯಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ಅಧೋಗತಿಗೆ ತಳ್ಳಿದೆ ಎಂದು ಕಿಡಿಕಾರಿದರು. ಅವರು ಪಡುವಲಹಿಪ್ಪೆ ಗ್ರಾಮ ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರ ಬೀಳುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ ಗೌಡರು, ಬಿಜೆಪಿ ಸರ್ಕಾರ ಪತನವಾದ ನಂತರ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಸರ್ಕಾರ ಪತನವಾದ ನಂತರ, ಕಾಂಗ್ರೆಸ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಜೆಡಿಎಸ್ ತನ್ನ ಮುಂದಿನ ನಡೆಯನ್ನು ಅವಲಂಬಿಸಿದೆ ಎಂದು ಹೇಳಿದರು. ರಾಜಕೀಯ ಆರಂಭಕ್ಕೂ ಒಂದು ಕಾಲ ಇದೆ, ಹಾಗೆಯೇ ಅಂತಿಮಗೊಳ್ಳುವುದಕ್ಕೂ ಒಂದು ಕಾಲವಿದೆ ಎಂದು ಮಾರ್ಮಿಕವಾಗಿ ನುಡಿದ ಅವರು, ಬಿಜೆಪಿ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.