ಈವರೆಗೆ ಭಿನ್ನರಾಗವನ್ನೇ ಹಾಡುತ್ತಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಈಗ ರಾಗ ಬದಲಿಸಿರುವ ಮೂಲಕ, ನಮ್ಮ ನಾಯಕ ಯಡಿಯೂರಪ್ಪ ಎಂದು ಹೇಳಿದ್ದಾರೆ.
ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಅತೃಪ್ತ ಶಾಸಕರ ಸಭೆ ನಡೆದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸಿಎಂ ಯಡಿಯೂರಪ್ಪ ಅವರೇ ನಮ್ಮ ನಾಯಕ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ನಾವೆಲ್ಲಾ ಒಂದೇ ಎಂದು ಹೇಳಿದ್ದಾರೆ.
ಖಂಡಿತ ನಮ್ಮ ನಡುವೆ ಗುಂಪಿಲ್ಲ. ನಾವೆಲ್ಲಾ ಒಂದೇ ಮನೆಯ ಸದಸ್ಯರು. ಸಮಾನ ಮನಸ್ಕರು. ನಾವು ಯಾವುದೇ ಬೇಡಿಕೆಯಿಟ್ಟಿಲ್ಲ. ನಾಳೆ ಸದನದಲ್ಲಿ ನಡೆಯುವ ವಿಚಾರಗಳ ಚರ್ಚೆಗೆ ಇಲ್ಲಿ ಬಂದಿದ್ದೇವೆ. ನಾಳೆ ಸದನದಲ್ಲಿ ವಿರೋಧಪಕ್ಷಗಳು ನಮ್ಮ ವಿರುದ್ಧ ಪಟ್ಟು ಹಿಡಿಯಲಿವೆ. ಅದನ್ನು ಎದುರಿಸುವ ಸಂಬಂಧ ನಾವೆಲ್ಲಾ ಸಮಾನ ಮನಸ್ಕರಾಗಿ ಒಗ್ಗಟ್ಟಾಗಿ ಚರ್ಚೆ ನಡೆಸುತ್ತಿದ್ದೇವೆ. ನಾವೇನೂ ಸಿಎಂ ಅವರಲ್ಲಿ ಬೇಡಿಕೆಯಿಟ್ಟಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ಈ ಹಿಂದೆ, ಭಿನ್ನಮತೀಯರ ಪೈಕಿ ಮೂರು ಮಂದಿಯನ್ನು ಸಚಿವರನ್ನಾಗಿ ನೇಮಿಸಿ 7-8ಮಂದಿಗೆ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಒಂದಿಬ್ಬರು ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ನೀಡಬೇಕೆಂಬ ಆಗ್ರಹವನ್ನು ಭಿನ್ನಮತೀಯರು ಮುಖ್ಯಮಂತ್ರಿಯವರ ಮುಂದಿಟ್ಟಿದ್ದರು. ಯಡಿಯೂರಪ್ಪ ಅವರಿಂದ ಸಿಹಿ ಸುದ್ದಿ ದೊರೆಯದಿದ್ದರೆ, ನಮ್ಮದೇ ಆದ ರಾಜಕೀಯ ದಾರಿಯನ್ನು ತುಳಿಯಬೇಕಾದಿತು ಸಂದೇಶವನ್ನೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನೇತೃತ್ವದ ಭಿನ್ನರ ಬಣ ಸಂದೇಶ ರವಾನಿಸಿದ್ದರು.
ಸಭೆಗೂ ಮೊದಲು ಸಂಸದ ಅನಂತಕುಮಾರ್ ಮಾತನಾಡಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಹಗಲು ಕನಸು ಕಾಣುತ್ತಿವೆ. ಭಿನ್ನಮತವಿದ್ದರೆ ಅದನ್ನು ಪಕ್ಷದ ಚೌಕಟ್ಟಿನಲ್ಲೇ ಪರಿಹಾರ ನೀಡುತ್ತೇವೆ. ನಮಗೆ ನಮ್ಮ ಸಾಸಕರ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದಿದ್ದಾರೆ.
ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡುತ್ತಾ, ಎಲ್ಲ ಪಕ್ಷಗಳಂತೆ ನಮ್ಮ ಪಕ್ಷದಲ್ಲೂ ಬಿಕ್ಕಟ್ಟಿದೆ. ಅತೃಪ್ತರ ಬೇಡಿಕೆ ಸಂಬಂಧ ಚರ್ಚೆ ನಡೆಸುತ್ತಿದ್ದೇವೆ. ಒಮ್ಮತಕ್ಕೆ ಬಂದೇ ಬರುತ್ತೇವೆ ಎಂದಿದ್ದಾರೆ.