ಸಚಿವ ಸ್ಥಾನ ನೀಡಬೇಕೆಂದು ತನ್ನನ್ನು ಯಾರೂ ಬ್ಲ್ಯಾಕ್‌ಮೇಲ್ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಪಕ್ಷದೊಳಗಿನ ಬಿಕ್ಕಟ್ಟು ಎಲ್ಲ ಶಮನಗೊಂಡಿದೆ. ಅಲ್ಲದೇ ಖಾಲಿ ಇರುವ ಒಂದು ಸಚಿವ ಸ್ಥಾನಕ್ಕೆ ಒಬ್ಬರನ್ನು ಆಯ್ಕೆ ಮಾಡಲಾಗುವುದು ಎಂದ ಅವರು, ಆ ಸ್ಥಾನಕ್ಕಾಗಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರನ್ನು ನೇಮಕ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದೊಳಗೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ, ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುವುದು. ಶಾಸಕ ರೇಣುಕಾಚಾರ್ಯಗೆ ಸಚಿವ ಪಟ್ಟ ನೀಡುತ್ತಿರುವ ಬಗ್ಗೆ ಕೆಲವು ಶಾಸಕರು ಅಪಸ್ವರ ಎತ್ತಿದ್ದಾರೆ. ಆದರೆ ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಸಚಿವ ಸ್ಥಾನಕ್ಕಾಗಿ ತನ್ನನ್ನು ಯಾರೂ ಬ್ಲಾಕ್ ಮೇಲ್ ಮಾಡಿಲ್ಲ ಅವೆಲ್ಲ ಕೇವಲ ಊಹಾಪೋಹ ಎಂದರು.