ಮೈಸೂರು ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಸಿದ್ದರಾಮಯ್ಯನವರೇ ನೇರ ಕಾರಣ ಎಂದು ಗಂಭೀರವಾಗಿ ಆರೋಪಿಸಿರುವ ಪಕ್ಷದ ಪರಾಜಿತ ಅಭ್ಯರ್ಥಿ ಎನ್.ಮಂಜುನಾಥ್, ಪ್ರಚಾರ ನಡೆಸದೇ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಸಿದ್ದರಾಮಯ್ಯ ಅವರ ವರ್ಚಸ್ಸಿಲ್ಲ. ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ನನ್ನ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣರಾಗಿದ್ದಾರೆ ಎಂದು ದೂರಿದರು.
ಆ ನಿಟ್ಟಿನಲ್ಲಿ ರಾಜ್ಯದ ಜನತೆ ಮತ್ತು ಪಕ್ಷದ ಏಳಿಗೆಯ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಕೂಡಲೇ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಮೊದಲಿನಿಂದಲೂ ಅಹಿಂದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತ, ಪಕ್ಷದ ಏಳಿಗೆಗೆ ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ. ಹಾಗೆ ಈ ಬಾರಿಯ ಮೇಲ್ಮನೆ ಚುನಾವಣೆಯಲ್ಲೂ ಕೂಡ ತನ್ನ ಪರ ಸಮರ್ಪಕವಾಗಿ ಪ್ರಚಾರ ನಡೆಸದೇ ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಪಕ್ಷದ ವರಿಷ್ಠೆ ಸೋನಿಯಾಗಾಂಧಿ ಅವರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.