ಬಂಡಾಯದ ಕಹಳೆ ಮೊಳಗಿಸಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರನ್ನು ಸಚಿವರನ್ನಾಗಿ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ಸೂಚಿಸಿರುವ ಬೆನ್ನಲ್ಲೇ, ತನ್ನ ಪ್ರಮಾಣವಚನ ಸಮಾರಂಭಕ್ಕೆ ಬನ್ನಿ ಅಂತ ಹೊನ್ನಾಳಿ ಆಹ್ವಾನ ನೀಡಲು ಆರಂಭಿಸಿದ್ದಾರೆ!
ಹಲವು ಶಾಸಕರ ವಿರೋಧದ ನಡುವೆಯೂ ರೇಣುಕಾಚಾರ್ಯ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸೋಮವಾರ ಮುಖ್ಯಮಂತ್ರಿಗಳು ತಿಳಿಸಿದ್ದರು. ಆ ನಿಟ್ಟಿನಲ್ಲಿ ರೇಣುಕಾಚಾರ್ಯ ಇದೀಗ ಮದುಮಗನಂತೆ ಸಂಭ್ರಮದಿಂದ ಒಡಾಡುತ್ತಿದ್ದಾರೆ. ಅಲ್ಲದೆ, ಗುರುವಾರ ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭವಿದ್ದು, ತಾವೆಲ್ಲರೂ ಬರಬೇಕೆಂದು ಕಂಡಕಂಡವರನ್ನು ರೇಣುಕಾ ಆಹ್ವಾನಿಸುತ್ತಿದ್ದಾರಂತೆ.
ವಿಧಾನ ಸಭೆ ಮೊಗಸಾಲೆಯಲ್ಲಿ ಖುಷಿಖುಷಿಯಾಗಿ ಒಡಾಡಿಕೊಂಡಿದ್ದ ರೇಣುಕಾಚಾರ್ಯ, ಶಾಸಕ ಮಿತ್ರರು ಹಾಗೂ ಪತ್ರಕರ್ತರ ಬಳಿ ತಾವಾಗಿಯೇ ತಮ್ಮ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೆ ಗುರುವಾರ ಬೆಳಿಗ್ಗೆ 9.30ಕ್ಕೆ ಪ್ರಮಾಣವಚನ ನಡೆಯಲಿದೆ ಎಂದೂ ತಿಳಿಸಿದ್ದಾರೆ. ಅಲ್ಲದೇ, ಸಿಎಂ ತನಗೆ ವಸತಿ ಖಾತೆಯನ್ನೇ ನೀಡುತ್ತಾರೆ ಎಂದು ಹೇಳಿಕೊಂಡು ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.