ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಸಚಿವ ಸ್ಥಾನ ನೀಡುವುದಕ್ಕೆ ಬಿಜೆಪಿಯ ಶಾಸಕರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 28ಕ್ಕೂ ಹೆಚ್ಚು ಶಾಸಕರು ಸಹಿ ಸಂಗ್ರಹಕ್ಕೆ ಮುಂದಾಗುವ ಮೂಲಕ ಮತ್ತೊಂದು ಬಿಕ್ಕಟ್ಟಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಿಲುಕಿಕೊಂಡಂತಾಗಿದೆ.
ಪಕ್ಷದಲ್ಲಿನ ಹಿರಿಯರನ್ನು ಬಿಟ್ಟು ರೇಣುಕಾಚಾರ್ಯ ಅವರಿಗೆ ಸಚಿವ ಪಟ್ಟ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿ ಕೆ.ಆರ್.ಪುರ ಶಾಸಕ ನಂದೀಶ್ ರೆಡ್ಡಿ ಅವರ ಸಾರಥ್ಯದಲ್ಲಿ 28ಶಾಸಕರ ಸಹಿ ಸಂಗ್ರಹಿಸಲಾಗಿದೆ.
ಅಲ್ಲದೇ, ಕೂಡಲೇ ಶಾಸಕಾಂಗ ಪಕ್ಷದ ಕರೆಯುವಂತೆ ಪಕ್ಷದ 28ಸದಸ್ಯರು ಸಹಿ ಸಂಗ್ರಹದ ಪತ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೋರಲಾಗಿದೆ ಎಂದು ನಂದೀಶ್ ತಿಳಿಸಿದ್ದಾರೆ. ಸಂಜೆಯೊಳಗೆ ಸಹಿ ಸಂಗ್ರಹದ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಹೊನ್ನಾಳಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಸೋಮವಾರ ತಿಳಿಸಿದ್ದರು. ಆ ಹಿನ್ನೆಲೆಯಲ್ಲಿ ಬೆಂಗಳೂರು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.