ಕಳಪೆ ಕಾಮಗಾರಿ:ಎಲ್ ಅಂಡ್ ಟಿ, ಸೀಮೆನ್ಸ್ ನಿಷೇಧಕ್ಕೆ ಶಿಫಾರಸು
ಬೆಂಗಳೂರು, ಮಂಗಳವಾರ, 22 ಡಿಸೆಂಬರ್ 2009( 15:42 IST )
NRB
ಕಳಪೆ ಗುಣಮಟ್ಟದಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ನಿರ್ಮಿಸಿದ ಎಲ್ ಅಂಡ್ ಟಿ, ಸೀಮೆನ್ಸ್ ಮತ್ತು ಯೂನಿಕ್ ಜುರಿಚ್ ಏರ್‌ಪೋರ್ಟ್ ಕಂಪೆನಿಗಳಿಗೆ ಐದು ವರ್ಷಗಳ ಕಾಲ ನಿಷೇಧ ಹೇರಬೇಕು ಎಂಬ ಶಿಫಾರಸ್ಸನ್ನು ಒಳಗೊಂಡ ವರದಿಯನ್ನು ವಿಧಾನಮಂಡಲದ ಜಂಟಿಸದನ ಸಮಿತಿ ಸೋಮವಾರ ಸದನದಲ್ಲಿ ಮಂಡಿಸಿದೆ.
ಅಲ್ಲದೇ, ಈ ಕಂಪನಿಗಳಿಗೆ ಗುತ್ತಿಗೆ ನೀಡುವ ನಿರ್ಧಾರ ಕೈಗೊಳ್ಳುವ ಉನ್ನತ ಮಟ್ಟದ ಸಮಿತಿಯಲ್ಲಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಬಗ್ಗೆಯೂ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ನಿರ್ಣಯ ಕೈಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದೆ.
ವಿಮಾನ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಸಂಸ್ಥೆಯಿಂದ ಕೂಡಲೇ 100.26ಕೋಟಿ ರೂಪಾಯಿ ವಸೂಲು ಮಾಡಬೇಕು. ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಡಬೇಕು. ಪ್ರಯಾಣಿಕರಿಂದ ಬಳಕೆ ಶುಲ್ಕ ವಸೂಲು ಮಾಡಬಾರದು. ತಪ್ಪಿತಸ್ಥ 22ಹಿರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬುದಾಗಿಯೂ ಸಮಿತಿ ವರದಿಯಲ್ಲಿ ಹೇಳಿದೆ.