ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಗರಣ ನಡೆದಿಲ್ಲವಾದ್ರೆ ಸಿಎಂ ಮನೆ ಆಳಾಗ್ತೇನೆ: ಉಗ್ರಪ್ಪ (Ugrappa | Congress | Yeddyurappa | JDS | Karnataka legislative council)
'ಸೈಕಲ್ ಖರೀದಿಯಲ್ಲಿ ಹಗರಣ ನಡೆದಿಲ್ಲ ಎಂದಾದರೆ ನಾನು ರಾಜಕೀಯ ಸನ್ಯಾಸ ಪಡೆದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯಲ್ಲಿ ಆಳಾಗಿ ದುಡಿಯುತ್ತೇನೆ'. ಇದು ಮಂಗಳವಾರ ವಿಧಾನಪರಿಷತ್ ಕಲಾಪದಲ್ಲಿ ಸಿಎಂಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಅವರು ಹಾಕಿದ ಸವಾಲು!
ಮಂಗಳವಾರ ಮೇಲ್ಮನೆ ಕಲಾಪದಲ್ಲಿ ಸೈಕಲ್ ಹಗರಣ ಸಾಕಷ್ಟು ಕೋಲಾಹಲ ಸೃಷ್ಟಿಸಿತು. ಕೇವಲ 2,100ರೂಪಾಯಿಗೆ ಸಿಗುವ ಸೈಕಲನ್ನು2,400ರೂ.ಗೆ ಖರೀದಿ ಮಾಡಲಾಗಿದೆ. ಕಳೆದ ವರ್ಷ ಸಹ ಇದೇ ರೀತಿಯಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ತಿಳಿಸಿದ್ದರು. ಒಂದು ವರ್ಷವಾದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಉಗ್ರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸೈಕಲ್ ಖರೀದಿಯಲ್ಲಿ ಯಾವುದೇ ಹಗರಣ ನಡೆದಿಲ್ಲ, ಈ ವಿಷಯದಲ್ಲಿ ಸರ್ಕಾರ ಪಾರದರ್ಶಕವಾಗಿ ನಡೆದುಕೊಂಡಿದೆ. ಟೆಂಡರ್ ಕರೆದು ನೆಗೋಷಿಯೇಟ್ ಮಾಡಿ ದೇಶದ ಹಲವು ಭಾಗಗಳಲ್ಲಿ ವಿಚಾರಿಸಿ ಅತ್ಯಂತ ಕಡಿಮೆ ಬೆಲೆಗೆ ಸೈಕಲ್ ಖರೀದಿಸಲಾಗಿದೆ. ಈ ಬಗ್ಗೆ ಯಾವುದೇ ತನಿಖೆಗೂ ಸಿದ್ದ ಎಂಬುದಾಗಿಯೂ ಹೇಳಿದರು.
ಮುಖ್ಯಮಂತ್ರಿಗಳ ಸಮಜಾಯಿಷಿ ಕೇಳಿ ಆಕ್ರೋಶಗೊಂಡ ಉಗ್ರಪ್ಪ,ಸೈಕಲ್ ಖರೀದಿಯಲ್ಲಿ ಹಗರಣ ನಡೆದಿಲ್ಲ ಎಂದಾದರೆ ತಾನು ರಾಜಕೀಯ ಸನ್ಯಾಸ ತೆಗೆದುಕೊಂಡು, ಸಿಎಂ ಮನೆಯಲ್ಲಿ ಆಳಾಗಿ ದುಡಿಯುತ್ತೇನೆ ಎಂದು ಸವಾಲು ಹಾಕಿದರು.
ಸೈಕಲ್ ಖರೀದಿ ಹಗರಣದ ಆರೋಪ-ಪ್ರತ್ಯಾರೋಪ ನಡೆಯುತ್ತಿರುವ ನಡುವೆಯೇ ಜೆಡಿಎಸ್ ಸದಸ್ಯರೂ ಧ್ವನಿಗೂಡಿಸಿದರು. ನಂತರ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿಗಳು ಸೈಕಲ್ ಖರೀದಿ ಹಗರಣ ಕುರಿತು ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸುವುದಾಗಿ ಹೇಳಿದರು.