ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಬಂಗಲೆ ಬಿದ್ದು ಹೋಗಿದ್ದರೆ, ಅದನ್ನು ಸರ್ಕಾರ ಕಟ್ಟಿಸಿಕೊಡಬೇಕು ಎಂದು ಬಯಸುವುದು ಸರಿಯಲ್ಲ. ಬಡವರಿಗೆ ಮಾತ್ರ ಪುನರ್ವಸತಿ ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ನೆರೆ ಹಾವಳಿ ಕುರಿತ ಚರ್ಚೆ ಸಂದರ್ಭದಲ್ಲಿ, ಪರಿಹಾರ ಕಾರ್ಯದಲ್ಲಿ ತಾರತಮ್ಯ ನಡೆದಿದೆ ಎಂಬ ಪ್ರತಿಪಕ್ಷದ ವಾದದ ವಿರುದ್ಧ ಸಿಎಂ ಪ್ರತಿವಾದ ನಡೆಸಿ ಈ ಪ್ರತಿಕ್ರಿಯೆ ನೀಡಿದರು.
ದೊಡ್ಡ ಮನೆಗಳು ನೆರೆಯಿಂದ ಹಾಳಾಗಿದ್ದು ದನಕರುಗಳನ್ನು ಕಟ್ಟಿಕೊಳ್ಳಲು ಕೊಟ್ಟಿಗೆ ಕೂಡ ದಿಕ್ಕಿಲ್ಲ ಎಂದ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನೆರೆಯಿಂದ ಬಂಗಲೆಗಳನ್ನು ಕಳೆದುಕೊಂಡಿದ್ದರೆ ಅದಕ್ಕೆ ಪರಿಹಾರ ನೀಡಲು ಸರ್ಕಾರದಿಂದ ಸಾಧ್ಯವಿಲ್ಲ. ದೊಡ್ಡ ನಿವೇಶನಗಳು ಬೇಕಾದಲ್ಲಿ ಅಗತ್ಯ ನಿವೇಶನಗಳನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.