ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಫಲಿತಾಂಶ ಜಾತ್ಯತೀತ ಶಕ್ತಿಗಳು ಒಗ್ಗೂಡಿ ಚುನಾವಣೆಗಳಲ್ಲಿ ಹೋರಾಡುವ ಅಗತ್ಯತೆಯನ್ನು ಎತ್ತಿ ತೋರಿಸಿದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಘೋಷಣೆಯಾದ ಫಲಿತಾಂಶದಲ್ಲಿ ಮೈತ್ರಿಕೂಟ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ರಮವಾಗಿ 10, 5 ಸ್ಥಾನಗಳನ್ನು ಗೆದ್ದು ವಿಧಾನ ಪರಿಷತ್ ಪ್ರವೇಶಿಸುವುದು ಮೈತ್ರಿಗೆ ಸಹಕಾರಿಯಾಗಿದೆ ಎಂದಿದ್ದಾರೆ. ಬಿಜೆಪಿ ದುರಾಡಳಿತದಿಂದ ಬೇಸತ್ತ ಸ್ಥಳೀಯ ಸಂಸ್ಥೆ ಮತದಾರರು ಈ ಚುನಾವಣೆಯಲ್ಲಿ ತಮ್ಮ ತೀರ್ಮಾನ ಪ್ರಕಟಿಸಿದ್ದು, ಜಾತ್ಯತೀತ ಶಕ್ತಿಗಳನ್ನು ಬೆಂಬಲಿಸಿದ್ದಾರೆ.
ಹಣ ಬಲದಿಂದ ಚುನಾವಣೆಗಳಲ್ಲಿ ಗೆಲುವು ಸಾಧಿಸಬಹುದೆಂಬ ಬಿಜೆಪಿ ತಂತ್ರಕ್ಕೆ ಮೇಲ್ಮನೆ ಚುನಾವಣೆಯಲ್ಲಿ ಪಾಠ ಕಲಿಸಿದಂತಾಗಿದೆ. ಆ ನಿಟ್ಟಿನಲ್ಲಿ ಇನ್ನು ಮುಂದಾದರು ಆಡಳಿತಾರೂಢ ಬಿಜೆಪಿ ಪಕ್ಷ ಸಂವಿಧಾನ ವಿರೋಧಿ ತಂತ್ರಗಾರಿಕೆಯಲ್ಲಿ ತೊಡಗುವುದನ್ನು ನಿಲ್ಲಿಸಲಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಗೆದ್ದವರನ್ನು, ಪಕ್ಷದ ಕಾರ್ಯಕರ್ತರನ್ನು, ಬೆಂಬಲಿಗರನ್ನು ಅಭಿನಂದಿಸುವುದಾಗಿ ಹೇಳಿದರು.