ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ನೀಡಿರುವ ವರದಿ ಆಧರಿಸಿ ಸುಮಾರು 56ಗಣಿ ಗುತ್ತಿಗೆ ಪಡೆದ ಸಂಸ್ಥೆಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ನಡೆದ ವಿಧಾನಮಂಡಲ ಕಲಾಪದಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎ.ಮಂಜು ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು,ಲೋಕಾಯುಕ್ತ ವರದಿ ಪ್ರಕಾರ ರಾಜ್ಯದಲ್ಲಿ ಶೇ.99ರಷ್ಟು ಅಕ್ರಮ ಗಣಿಗಾರಿಕೆಗೆ 56ಗಣಿ ಗುತ್ತಿಗೆ ಪಡೆದ ಸಂಸ್ಥೆಗಳು ಕಾರಣ. ಈ ಎಲ್ಲಾ ಸಂಸ್ಥೆಗಳ ಮೇಲೆ ಸರ್ಕಾರ ದೂರು ದಾಖಲಿಸಿದೆ ಎಂದು ಸ್ಪಷ್ಟಪಡಿಸಿದರು.
ಇದರಲ್ಲಿ 27ಗಣಿ ಗುತ್ತಿಗೆ ಪಡೆದ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿ, ತನಿಖೆಗೆ ತಡೆಯಾಜ್ಞೆ ತಂದಿವೆ. ಇದಲ್ಲದೆ, 64 ಸ್ಟಾಕ್‌ಯಾರ್ಡ್ ಗಣಿ ಗುತ್ತಿಗೆಯನ್ನು ರದ್ದು ಪಡಿಸಲಾಗಿದೆ. ಚಿತ್ರದುರ್ಗದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 1.76ಲಕ್ಷ ಮೆಟ್ರಿಕ್ ಟನ್ ಕಬ್ಬಿಣ ಅದಿರನ್ನು ವಶಪಡಿಸಿಕೊಂಡು, 52ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.
ಲೋಕಾಯುಕ್ತ ವರದಿ ಆಧರಿಸಿ ಈ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.ರಾಜ್ಯದಲ್ಲಿ ಪ್ರಸ್ತುತ 177 ಸಂಸ್ಥೆಗಳಿಗೆ ಗಣಿ ಗುತ್ತಿಗೆ ನೀಡಲಾಗಿದ್ದು, ಈ ಪೈಕಿ 103 ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. 74ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದರು.