'ಜನರ ಸಮಸ್ಯೆಯನ್ನು ಅರಿತು ಸಮರ್ಪಕವಾಗಿ ಆಡಳಿತ ನಡೆಸಲು ಆಗದೇ ಇದ್ರೆ ರಾಜೀನಾಮೆ ಕೊಟ್ಟು ಹೋಗಿ. ನಾವು ಅಧಿಕಾರ ನಡೆಸುತ್ತೇವೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಲಾಪದಲ್ಲಿ ಹಾಕಿದ ಬಹಿರಂಗ ಸವಾಲು.
ನೆರೆ ಪರಿಹಾರ ಕುರಿತು ಮಂಗಳವಾರ ವಿಧಾನಮಂಡಲದ ಕಲಾಪದ ವೇಳೆ ಚರ್ಚೆಯಲ್ಲಿ ಭಾಗಿಯಾಗಿದ್ದ ಅವರು, ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹಾರ ವಿತರಿಸಿಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ಕುಸಿದು ಹೋಗಿದೆ. ಸರ್ಕಾರದ ಸೆಕ್ಯೂರಿಟಿ ಅಡ ಇಟ್ಟು ಸಾಲ ಪಡೆಯುತ್ತಿದೆ ಎಂದು ಕಟುವಾಗಿ ಟೀಕಿಸಿದರು. ಈ ಹಂತದಲ್ಲಿ, ಹಣ ಇಲ್ಲದೇ ಪರಿಹಾರ ಕೊಡೋದು ಹೇಗೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದಾಗ, ಸಿಟ್ಟಿಗೆದ್ದ ಸಿದ್ದರಾಮಯ್ಯ ನಿಮಗೆ ಸಾಧ್ಯವಾಗದಿದ್ರೆ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯಿರಿ ಎಂದು ನೇರವಾಗಿ ಹೇಳಿದರು.
ಕಬ್ಬಿಣದ ಅದಿರು ಲಾರಿ ಮೇಲೆ ಸಾವಿರ ರೂಪಾಯಿ ತೆರಿಗೆ ಹಾಕ್ತೀವಿ ಅಂತ ಕ್ಯಾಬಿನೆಟ್‌ನಲ್ಲಿ ಅನುಮೋದನೆ ಪಡೆದುಕೊಂಡ್ರಿ, ಯಾಕೆ ಹಾಕಿಲ್ಲ? ಹಾಕದೇ ಇದ್ರೆ ಸಂಪನ್ಮೂಲ ಹೇಗೆ ಬರುತ್ತೆ?ರಾಜ್ಯದ ಹಿತಾಸಕ್ತಿಂತ ನಿಮಗೆ ಖುರ್ಚಿ ಮುಖ್ಯ ಆಯ್ತಾ ಅಂತ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದಲ್ಲಿ ಆರು ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಕೇವಲ 7,437ಮನೆಗಳಿಗೆ ಮಾತ್ರ ಮಂಜೂರಾತಿ ನೀಡಿದೆ ಎಂದು ಸಮಜಾಯಿಷಿ ನೀಡಿದರು.