'ಉದ್ಯಾನನಗರಿಯಲ್ಲಿ ಎಲ್ಲೆಂದರಲ್ಲಿ ರಾರಾಜಿಸುತ್ತಿರುವ ಕಟೌಟ್, ಬ್ಯಾನರ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜಕಾರಣಿಗಳು ಸೇರಿದಂತೆ ಯಾವುದೇ ಸಂಘ-ಸಂಸ್ಥೆಗಳು ನಗರದಲ್ಲಿ ಫ್ಲೆಕ್ಸ್ ಹಾಕುವುದನ್ನು ನಿಷೇಧಿಸಲಾಗಿದೆ' ಎಂದು ಸಚಿವ ಸುರೇಶ್ ಕುಮಾರ್ ವಿಧಾನಮಂಡಲದಲ್ಲಿ ತಿಳಿಸಿದ್ದಾರೆ.
ಬುಧವಾರ ವಿಧಾನಮಂಡಲ ಕಲಾಪದಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ನಗರದಲ್ಲಿ ರಾಜಕಾರಣಿಗಳು ಸೇರಿದಂತೆ ಯಾರೂ ಕೂಡ ಕಟೌಟ್, ಬ್ಯಾನರ್ ಹಾಕುವಂತಿಲ್ಲ. ಒಂದು ವೇಳೆ ನಿಷೇಧ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದರು.
ನಗರದಲ್ಲಿ ಹೆಚ್ಚುತ್ತಿರುವ ಫ್ಲೆಕ್ಸ್ ಹಾವಳಿ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಆ ಹಿನ್ನೆಲೆಯಲ್ಲಿ ಬ್ಯಾನರ್ ಹಾವಳಿ ತಡೆಯಲು ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಅಲ್ಲದೇ, ವಿಧಾನಸೌಧ, ಹೈಕೋರ್ಟ್ ಹಾಗೂ ಶಾಸಕರ ಭವನದ ಸುತ್ತಮುತ್ತ ಹಾಕಿರುವ ಬ್ಯಾನರ್, ಕಟೌಟ್‌ಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಈ ಅಧಿಕಾರಿಗಳಿಗೆ ಸೂಚಿಸಿದರು.
ರಾಜಕೀಯ ಸಮಾವೇಶ, ಹುಟ್ಟುಹಬ್ಬ ಸೇರಿದಂತೆ ಯಾವುದೇ ಬಗೆಯ ಬ್ಯಾನರ್, ಕಟೌಟ್ ಕಟ್ಟುವಂತಿಲ್ಲ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಿನ ದಿನಗಳಲ್ಲಿ ಬಿಬಿಎಂಪಿ ನೇತೃತ್ವದಲ್ಲಿ ದಳ ರಚನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.