ಕ್ಷುಲ್ಲಕ ಕಾರಣಕ್ಕೆ ಸಂಭವಿಸಿದ ಜಗಳವೊಂದು ಕೋಮು ಗಲಭೆಗೆ ತಿರುಗಿದ ಪರಿಣಾಮ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಅಂಗವಾಗಿ ನಗರದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಇಲ್ಲಿನ ಕಿಲ್ಲೆ ಪ್ರದೇಶದಲ್ಲಿನ ಮೂರು ದೇವಸ್ಥಾನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂದ ದೇವಾಲಯದ ಪ್ರವೇಶ ಭಾಗದ ಅಲಂಕಾರಿಕ ಮೂರ್ತಿಗಳು, ಪಾದಗಟ್ಟೆಗಳು ವಿಘ್ನಗೊಂಡಿವೆ.
ಈ ಘಟನೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಹಿಂದೇಟು ಹಾಕಿದ ಕ್ರಮವನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಮಂಗಳವಾರ ಬಂದ್‌ಗೆ ಕರೆ ನೀಡಿದ್ದು, ಅದು ಬುಧವಾರ ಕೂಡ ಮುಂದುವರಿದಿದೆ. ಇದರಿಂದ ನಗರ ಮತ್ತಷ್ಟು ಪ್ರಕ್ಷುಬ್ಧಗೊಂಡು ಅಲ್ಲಲ್ಲಿ ಕಲ್ಲು ತೂರಾಟ, ಹಲ್ಲೆ ಘಟನೆಗಳು ನಡೆದಿರುವುದು ವರದಿಯಾಗಿದೆ.