ಕುಷ್ಟಗಿ ತಾಲೂಕಿನ ಮಾಲಗತ್ತಿಯಲ್ಲಿ ನೆರೆ ಪೀಡಿತರಿಗೆ ಸರ್ಕಾರ ವಿತರಿಸಿದ ಪರಿಹಾರದ ಚೆಕ್‌ಗಳು ನಗದು ಆಗಿಲ್ಲ ಎಂಬ ವಿಚಾರ ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿ, ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿಗೆ ಎಡೆಮಾಡಿಕೊಟ್ಟಿತು.
ಮಂಗಳವಾರ ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ ಅವರು ವಿಷಯ ಪ್ರಸ್ತಾಪಿಸಿ, ನೆರೆ ಸಂತ್ರಸ್ತರಿಗೆ ಸರ್ಕಾರ ನೀಡಿದ ಚೆಕ್‌ಗಳು ನಗದು ಆಗುತ್ತಿಲ್ಲ. ಚೆಕ್ ನೀಡಿ ಒಂದೂವರೆ ತಿಂಗಳಾದರೂ, ಬ್ಯಾಂಕ್ ಸಿಬ್ಬಂದಿ ಇನ್ನೂ 15 ದಿನ ಬಿಟ್ಟು ಬನ್ನಿ ಎಂದು ಸಂತ್ರಸ್ತರನ್ನು ಅಲೆಸುತ್ತಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಗಂಭೀರವಾಗಿ ಆರೋಪಿಸಿದರು.
ನೆರೆ ಸಂತ್ರಸ್ತರಿಗೆ ನೀಡಿದ ಪರಿಹಾರದ ಚೆಕ್ ಕೂಡ ನಗದು ಆಗುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕರುಣಾಕರ ರೆಡ್ಡಿ, ಅದು ಬ್ಯಾಂಕ್ ಸಿಬ್ಬಂದಿಗಳ ತಪ್ಪು ಎಂದು ಸಮಜಾಯಿಷಿ ನೀಡಿದರು. ಆದರೆ ಈ ಉತ್ತರದಿಂದ ಸಮಾಧಾನಗೊಳ್ಳದ ನಾಣಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.