ವೈದೇಹಿ 'ಕ್ರೌಂಚ ಪಕ್ಷಿ'ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗರಿ
ನವದೆಹಲಿ, ಬುಧವಾರ, 23 ಡಿಸೆಂಬರ್ 2009( 20:55 IST )
ಖ್ಯಾತ ಕಥೆಗಾರ್ತಿ ವೈದೇಹಿ ಅವರ ಕ್ರೌಂಚ ಪಕ್ಷಿ ಕಥಾಸಂಕಲನಕ್ಕೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದಿದೆ. ಎಂಟು ಕವನ ಸಂಕಲನ ಸೇರಿದಂತೆ ಒಟ್ಟು 24ವಿಭಾಗಗಳಲ್ಲಿ ಪುಸ್ತಕಗಳನ್ನು ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಣ್ಣ ಕಥಾಲೋಕದಲ್ಲಿ ಚಿರಪರಚಿತರಾಗಿರುವ ವೈದೇಹಿ ಅವರ ಕ್ರೌಂಚ ಪಕ್ಷಿ ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಮೂಲತಃ ಉಡುಪಿ ತಾಲೂಕಿನ ಐರೋಡಿಯ ವೈದೇಹಿ ಹಲವು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದರು. ವೈದೇಹಿ ಮೂಲ ಹೆಸರು ಜಾನಕಿ ಹೆಬ್ಬಾರ್. ಇದೀಗ ವೈದೇಹಿ ಮುಡಿಗೆ ಕೇಂದ್ರ ಅಕಾಡೆಮಿ ಸಾಹಿತ್ಯ ಪ್ರಶಸ್ತಿ ಗರಿ ಸೇರಿದಂತಾಗಿದೆ.
ಇನ್ನುಳಿದಂತೆ ಪ್ರದ್ನುಮ್ಮಾ ಸಿಂಗ್ ಜಿಂದ್ರಾಹಿಯಾ (ಡೋಗ್ರಿ), ಕೈಲಾಶ್ ವಾಜಿಪೇಯಿ (ಹಿಂದಿ), ಜೆಸ್ ಫೆರ್ನಾಂಡಿಸ್ (ಕೊಂಕಣಿ), ರಾಘು ಲಿಶಾಂಗ್ತೆಂ (ಮಣಿಪುರಿ), ವಸಂತ ಅಬಾಜಿ ಡಾಂಕೆ (ಮರಾಠಿ), ಫನಿ ಮೋಂಥಿ (ಒರಿಯಾ), ದಮಯಂತಿ ಬೆಸ್ರಾ (ಸಾಂತಾಲಿ) ಹಾಗೂ ಪುರಿಯರಸು (ತಮಿಳ್) ಸೇರಿದಂತೆ ದಿವಂಗತ ಮನಮೋಹನ್ ಜಾ (ಮೈತಾಲಿ), ಸಾಮಿರನ್ ಛೆತ್ರಿ ಪ್ರಿಯದರ್ಶಿ (ನೇಪಾಳಿ), ಮೇಜರ್ ರತನ್ ಜಾಂಗಿಡ್ (ರಾಜಸ್ತಾನಿ), ಪ್ರಾಸಸ್ಯಾ ಮಿತ್ರಾ ಶಾಸ್ತ್ರಿ (ಸಂಸ್ಕೃತ), ಆನಂದ್ ಕೇಮಾನಿ (ಸಿಂಧಿ), ಖ್ಯಾತ ಕಾದಂಬರಿಕಾರ ದುರ್ಬಾಜ್ಯೋತಿ ಬೋರಾ (ಅಸ್ಸಾಮಿ), ದಿವಂಗತ ಮನೋರಂಜನ್ ಲಾಹರಿ (ಬೋಡೋ), ಯು.ಎ.ಖಾದರ್ (ಮಲಯಾಳಂ), ಯರಲಾಗಡ್ಡಾ ಲಕ್ಷ್ಮಿ ಪ್ರಸಾದ್ (ತೆಲುಗು) 2009ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.