ರಾಜಭವನದ ಗಾಜಿನಭವನದಲ್ಲಿ ಗುರುವಾರ ಬೆಳಿಗ್ಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಂಪುಟ ದರ್ಜೆ ಸಚಿವರಾಗಿ ಎಲ್ಲಾ ಮಠಾಧೀಶರು ಹಾಗೂ ತಂದೆ-ತಾಯಿ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ಬೆಳಿಗ್ಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ರೇಣುಕಾಚಾರ್ಯ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಜರಿದ್ದರು. ರೇಣುಕಾಚಾರ್ಯ ಅವರಿಗೆ ಅಬಕಾರಿ ಖಾತೆ ನೀಡಲಾಗಿದೆ. ಕಟ್ಟಾ ಸುಬ್ರಹ್ಮಣ್ಯ ಅವರಿಗೆ ಹೆಚ್ಚುವರಿಯಾಗಿ ವಸತಿ ಖಾತೆ ಜವಾಬ್ದಾರಿ ವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.
ಹಲವು ಶಾಸಕರ ಪರ-ವಿರೋಧದ ನಡುವೆಯೇ ರೇಣುಕಾಚಾರ್ಯ ಅವರು ಸಚಿವರಾಗಿ ನೇಮಕಗೊಂಡಿದ್ದಾರೆ. ಪಕ್ಷದಲ್ಲಿ ಸಾಕಷ್ಟು ಹಿರಿಯರು ಇದ್ದಾಗಲೂ ಹೊಸಬರಿಗೆ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂದು ಬೆಂಗಳೂರು ಶಾಸಕರು ಎಂ.ಪಿ.ರೇಣುಕಾಚಾರ್ಯ ವಿರುದ್ಧ ಸಹಿ ಸಂಗ್ರಹಿಸಿದ್ದರು. ಆದರೆ ಮುಖ್ಯಮಂತ್ರಿಗಳ ಸಂಧಾನದ ಮೂಲಕ ಭಿನ್ನಮತ ಶಮನವಾಗಿದ್ದರೂ ಸಹ ಇಂದಿನ ಪ್ರಮಾಣವಚನ ಕಾರ್ಯಕ್ರಮದಲ್ಲಿ ಶಾಸಕರು ಸೇರಿದಂತೆ ಪಕ್ಷದ ಪ್ರಮುಖರೇ ಗೈರು ಹಾಜರಾಗಿದ್ದದ್ದು ವಿಶೇಷವಾಗಿತ್ತು.