ಪಕ್ಷ ವಿರೋಧಿ ಆರೋಪ: 'ಬೆಂಕಿ ಮಹಾದೇವ್' ಬಿಜೆಪಿಗೆ ರಾಜೀನಾಮೆ
ಮೈಸೂರು, ಗುರುವಾರ, 24 ಡಿಸೆಂಬರ್ 2009( 11:45 IST )
ಮೇಲ್ಮನೆ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂಬ ಆರೋಪದ ಮೇಲೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದಿಂದ ರಾತ್ರೋ ರಾತ್ರಿ ವಜಾಗೊಳಿಸಿರುವುದಕ್ಕೆ ಮನನೊಂದ ಬೆಂಕಿ ಮಹಾದೇವ್ ಅವರು ಬಿಜೆಪಿ ರಾಜೀನಾಮೆ ನೀಡಿದ್ದಾರೆ.
ಮಂಗಳವಾರ ರಾತ್ರಿ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದಿಂದ ಮಹಾದೇವ್ ಅವರನ್ನು ವಜಾಗೊಳಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಅದಕ್ಕೆ ಮನನೊಂದ ಅವರು ಬುಧವಾರ ಸಂಜೆ ಮೈಸೂರಿನಲ್ಲಿ ಬಿಜೆಪಿಗೆ ರಾಜೀನಾಮೆ ಪತ್ರ ರವಾನಿಸಿದ್ದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ಮನೋಭಾವದ ಕಾಂಗ್ರೆಸ್ ಪಕ್ಷವನ್ನು ತ್ಯಾಗ ಮಾಡಿ ಬಿಜೆಪಿ ಸೇರಿದ್ದೆ. ಆದರೆ ತಾನು ಮೇಲ್ಮನೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇನೆ ಎಂಬ ಆರೋಪ ಹೊರಿಸಿ, ನನಗೆ ಯಾವುದೇ ನೋಟಿಸ್ ಕೂಡ ನೀಡದೆ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಲಾಗಿದೆ ಎಂದು ದೂರಿದರು.
ಭಟ್ಟಂಗಿಗಳ ಮಾತುಗಳನ್ನು ಕೇಳುತ್ತಿರುವ ಮುಖ್ಯಮಂತ್ರಿಗಳಿಗೆ ವಿವೇಚನೆ ಇಲ್ಲ ಎಂದು ಹರಿಹಾಯ್ದಿರುವ ಅವರು, ತನಗೆ ವಿಧಾನಪರಿಷತ್ ಟಿಕೆಟ್ ನೀಡುತ್ತೇನೆ ಎಂದು ಹೇಳಿ ಮಾತಿಗೆ ತಪ್ಪಿದ್ದಾರೆ. ಆದರೆ ನಾನು ಯಾವುದೇ ಪಕ್ಷ ವಿರೋಧಿ ಕೆಲಸ ನಡೆಸಿಲ್ಲ ಎಂದು ಹೇಳಿದರು.