ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ 47 ವರ್ಷಗಳಷ್ಟು ಹಳೆಯದಾದ ಮೋಕಾ-ಹಗರಿ ಸೇತುವೆ ಅದಿರು ತುಂಬಿದ ವಾಹನಗಳು ಸಂಚರಿಸಿದ ಪರಿಣಾಮ ಕುಸಿದು ಬಿದ್ದಿದೆ. ಸೇತುವೆ ಕುಸಿತದಿಂದಾಗಿ 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಸೇತುವೆ 1962ರಲ್ಲಿ ನಿರ್ಮಾಣವಾಗಿತ್ತು. ಹಗರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೋಕಾ-ಹಗರಿ ಸೇತುವೆ 450ಮೀ.ಉದ್ದ ಹಾಗೂ 7.5ಮೀ. ಅಗಲವಿತ್ತು. ಇದೀಗ ಸುಮಾರು 20ಮೀ.ಗಳಷ್ಟು ಸೇತುವೆ ಕುಸಿದುಬಿದ್ದಿದೆ.
ನಿರಂತರವಾಗಿ ಮರಳು ಮತ್ತು ಅದಿರು ತುಂಬಿದ ಲಾರಿಗಳು ಸಂಚರಿಸಿದ ಪರಿಣಾಮ ಸೇತುವೆ ಶಿಥಿಲಗೊಂಡು, ಕುಸಿದು ಬಿದ್ದಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.