ಅತೃಪ್ತಿಯನ್ನು ಹೊರಹಾಕಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿ ಸಚಿವ ಪಟ್ಟ ಗಿಟ್ಟಿಸಿಕೊಂಡಿರುವ ರೇಣುಕಾಚಾರ್ಯ ಕುರಿತು ವಾಗ್ದಾಳಿ ನಡೆಸಿರುವ ಮಾಜಿ ಪ್ರೇಯಸಿ, ನರ್ಸ್ ಜಯಲಕ್ಷ್ಮಿಗೆ ಇದೀಗ ಪೊಲೀಸರು ರಕ್ಷಣೆ ಒದಗಿಸಿದ್ದಾರೆ.
ರೇಣುಕಾಚಾರ್ಯ ಸಚಿವಗಿರಿ ಕೇವಲ 32ದಿನ ಮಾತ್ರ ಎಂದು ನರ್ಸ್ ಭವಿಷ್ಯ ನುಡಿದಿದ್ದರು. ಅಲ್ಲದೇ, ರೇಣುಕಾಚಾರ್ಯ ಅವರ ನಡವಳಿಕೆ ರಾಜ್ಯದ ಜನತೆಗೆ ತಿಳಿದಿದೆ. ಇಂತಹವರಿಗೆ ಸಚಿವ ಪಟ್ಟ ದೊರಕಿರುವುದು ದುರಂತ ಎಂದೂ ಕೂಡ ಬಣ್ಣಿಸಿದ್ದರು.
ಈ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಜಯಲಕ್ಷ್ಮಿ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ತಮ್ಮನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ. ತಮಗೆ ಆಸಕ್ತಿ ಇಲ್ಲದಿದ್ದರೂ ವಿವಾಹವಾಗುವಂತೆ ಒತ್ತಾಯ ಮಾಡಿದ್ದಾರೆ ಎಂದು ಜಯಲಕ್ಷ್ಮಿ 2007ರಲ್ಲಿ ಪೊಲೀಸರಿಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ ತಾವು ಪೊಲೀಸ್ ರಕ್ಷಣೆ ಕೋರಿಲ್ಲ ಎಂದಿರುವ ಜಯಲಕ್ಷ್ಮಿ, ನನ್ನ ಜೀವಕ್ಕೆ ಅಪಾಯವಿದೆ ಎಂಬುದನ್ನು ಅರಿತು ಪೊಲೀಸ್ ಇಲಾಖೆಯೇ ರಕ್ಷಣೆ ಒದಗಿಸಿದೆ ಎಂದು ತಿಳಿಸಿದ್ದಾರೆ.