'ಆಡಳಿತಾರೂಢ ಬಿಜೆಪಿ ಸರ್ಕಾರದ ಪಾಪದ ಕೊಡ ತುಂಬಿದೆ. ಪಕ್ಷದ ಆಂತರಿಕ ಬಿಕ್ಕಟ್ಟಿನಿಂದಲೇ ಸರ್ಕಾರ ಪತನಗೊಳ್ಳಲಿದೆ' ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಭಾನುವಾರ ಕೊಪ್ಪಳಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಿಜೆಪಿ ಆಂತರಿಕ ಬಿಕ್ಕಟ್ಟಿನಿಂದ ಸರ್ಕಾರ ಪತನವಾದ್ರೆ ಸುಮ್ಮನೆ ಕೂರಲ್ಲ ಎಂದರು. ಬಿಜೆಪಿಯ ಜನ ವಿರೋಧಿ ನೀತಿಯಿಂದಾಗಿ ರಾಜ್ಯದ ಜನರು ರೋಸಿ ಹೋಗಿದ್ದಾರೆ ಎಂದು ಹೇಳಿದರು.
ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಇಲ್ಲದಿದ್ದರೂ ಕೂಡ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಬಿಜೆಪಿ, ರೈತ ಹಾಗೂ ಜನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಅಲ್ಲದೇ, ಸಂವಿಧಾನ ವಿರೋಧಿಯಾದ ಕಾರ್ಯನಿರ್ವಹಿಸುವಲ್ಲಿಯೇ ಬಿಜೆಪಿ ಸರ್ಕಾರ ನಿರತವಾಗಿದೆ ಎಂದರು.
ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುವುದು ಬಿಟ್ಟು, ಮುಖ್ಯಮಂತ್ರಿಗಳು ಸೇರಿದಂತೆ ಪ್ರತಿಯೊಬ್ಬರು ಕುರ್ಚಿ ಉಳಿಸಿಕೊಳ್ಳಲು ದಿನಕ್ಕೊಂದು ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.