ಆರೋಪ ಹೊತ್ತವರಿಗೆ ಬಿಜೆಪಿ ಬಡ್ತಿ ನೀಡುತ್ತೆ: ಮೊಯ್ಲಿ ವ್ಯಂಗ್ಯ
ಉಡುಪಿ, ಭಾನುವಾರ, 27 ಡಿಸೆಂಬರ್ 2009( 15:42 IST )
PTI
ಹಲವು ಆಪಾದನೆಗಳನ್ನು ಹೊತ್ತ ವ್ಯಕ್ತಿಯೊಬ್ಬ (ರೇಣುಕಾಚಾರ್ಯ)ರನ್ನು ರಾಜ್ಯ ಸರ್ಕಾರದ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು ನಾಚಿಕೆಗೇಡಿನ ವಿಷಯ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ವ್ಯಂಗ್ಯವಾಡಿದ್ದಾರೆ.
ಆರೋಪ ಹೊತ್ತವರಿಗೆ ಬಡ್ತಿ ನೀಡುವಂತಹ ಸಂಸ್ಕೃತಿ ಬಿಜೆಪಿಯದ್ದು ಎಂದು ಹೇಳಿರುವ ಅವರು, ಆಂಧ್ರಪ್ರದೇಶ ರಾಜ್ಯಪಾಲ ತಿವಾರಿ ಅವರ ವಿರುದ್ಧ ಲೈಂಗಿಕ ಹಗರಣದ ಆರೋಪ ಬರುತ್ತಿದ್ದಂತೆಯೇ ರಾಜೀನಾಮೆ ಪಡೆಯಲಾಗಿದೆ. ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಮೊಯ್ಲಿ ಹೇಳಿದರು.
ಆಡಳಿತಾರೂಢ ಬಿಜೆಪಿ ಸರ್ಕಾರದ ಇಂತಹ ನಿಲುವಿನಿಂದಾಗಿ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಲ್ಲಿರುವ ನಮ್ಮವರೂ ಕೇಳುವಂತಾಗಿದೆ. ನಮಗೆ ಕರ್ನಾಟಕದವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾರ ಹತೋಟಿಯಲ್ಲಿದ್ದಾರೆಂಬುದೇ ತಿಳಿಯುತ್ತಿಲ್ಲ. ಇಷ್ಟು ಕೆಟ್ಟ ಸರ್ಕಾರವನ್ನು ಇದುವರೆಗೆ ರಾಜ್ಯ ಕಂಡಿರಲಿಲ್ಲ. ಇದು ಬಿಜೆಪಿ ಸರ್ಕಾರದ ಲಕ್ಷಣ ಎಂದು ಲೇವಡಿ ಮಾಡಿದರು. ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್-ಜೆಡಿಎಸ್ ಬೀಳಿಸಬೇಕೆಂದಿಲ್ಲ, ಅವರೇ ಹೊಂಡ ತೊಡಿಕೊಳ್ಳುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.