ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಸಚಿವಗಿರಿ ದಯಪಾಲಿಸಿದ ಬೆನ್ನಲ್ಲೇ, ಬಿಜೆಪಿ ಪಾಳಯದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುವ ಮೂಲಕ ಭಿನ್ನರಾಗ ಹಾಡುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ತಮ್ಮೊಂದಿಗೆ ನಲ್ವತ್ತು ಶಾಸಕರು ಸಂಪರ್ಕದಲ್ಲಿದ್ದು, ಹಿರಿಯ ಶಾಸಕರಿಗೆ ಸೂಕ್ತಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ತದನಂತರ ಭಾನುವಾರ ಹುಬ್ಬಳ್ಳಿ ಶಾಸಕ ಚಂದ್ರಕಾಂತ್ ಬೆಲ್ಲದ್ ಕೂಡ, ತಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿದ್ದಾರೆ. ದಲಿತರಿಗೆ ಸ್ಥಾನಮಾನ ನೀಡದಿದ್ದರೆ ತಕ್ಕ ಪಾಠ ಕಲಿಸುವುದಾಗಿ ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಆ ನಿಟ್ಟಿನಲ್ಲಿ ಬಿಜೆಪಿ ಪಾಳಯದೊಳಗೆ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚತೊಡಗುವ ಮೂಲಕ ಒಬ್ಬೊಬ್ಬರದ್ದು ಒಂದೊಂದು ಬಣವಾಗತೊಡಗಿದೆ. ಮತ್ತೊಂದೆಡೆ ಕೈಮಗ್ಗ ನಿಗಮದ ಅಧ್ಯಕ್ಷ ಲಕ್ಷ್ಮಿನಾರಾಯಣ್, ತಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ರಾಯಬಾಗ ಶಾಸಕ ದುರ್ಯೋದನ ಐಹೊಳೆಯವರು, ಸಮನ್ವಯ ಸಮಿತಿಯಲ್ಲಿ ದಲಿತರಿಗೆ ಸ್ಥಾನಮಾನ ಸಿಕ್ಕಿಲ್ಲ ಎಂದು ಆರೋಪಿಸಿದ್ದು, ಹಿರಿಯರು, ಸಂಸದರಾದ ರಮೇಶ್ ಜಿಗಜಿಣಗಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಐಹೊಳೆ ಬೇಡಿಕೆಯನ್ನಿಟ್ಟಿದ್ದಾರೆ. ಅಲ್ಲದೇ ತಮ್ಮೊಂದಿಗೆ ಇಪ್ಪತ್ತು ಶಾಸಕರಿದ್ದಾರೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ.