ಬಿಜೆಪಿ ಸರ್ಕಾರ ತೊಲಗಿದ್ರೆ ರಾಜ್ಯಕ್ಕೆ ಒಳ್ಳೆಯದು: ದೇವೇಗೌಡ
ಬೆಂಗಳೂರು, ಸೋಮವಾರ, 28 ಡಿಸೆಂಬರ್ 2009( 11:09 IST )
PTI
ಜನ ಮತ್ತು ರೈತ ವಿರೋಧಿಯಾಗಿರುವ ಬಿಜೆಪಿ ಸರ್ಕಾರ ತೊಲಗಿದ್ದಷ್ಟು ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್ಗಳ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡುವ ಮುನ್ನ ಚೋಳೂರು ಪಾಳ್ಯದ ಬನಶಂಕರಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಷ್ಟು ಕೆಟ್ಟ ಸರ್ಕಾರ ಇದಾಗಿದೆ. ಈ ಸರ್ಕಾರ ತೊಲಗಿದ್ದಷ್ಟು ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು. ಈ ಸರ್ಕಾರ ನಿಮಿಷಕ್ಕೊಂದು ಮಾತು ಬದಲಿಸುತ್ತಿದೆ. ಯಾವುದು ಸತ್ಯ, ಯಾವುದು ಸುಳ್ಳು ಎಂದು ನಂಬದಂತಾಗಿದೆ ಎಂದು ಟೀಕಿಸಿದರು.
ಸರ್ಕಾರದಲ್ಲಿರುವ ಶಾಸಕರೇ ಮುಖ್ಯಮಂತ್ರಿಗಳನ್ನು ಬ್ಲ್ಯಾಕ್ಮೇಲ್ ಮಾಡಿ ತಮಗೆ ಬೇಕಾದ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇಂತಹ ದುರ್ಬಲ ಮುಖ್ಯಮಂತ್ರಿಯನ್ನು ನಾನೆಂದೂ ರಾಜ್ಯದಲ್ಲಿ ಕಂಡಿಲ್ಲ ಎಂದರು.